ದುಬೈ: ಭ್ರಷ್ಟಾಚಾರ ರಹಿತ ಶುದ್ದ ಸರ್ಕಾರ, ಪಾರದರ್ಶಕತೆ ಹೊಂದಿರುವ ಸರ್ಕಾರಗಳು ಇಂದಿನ ಅಗತ್ಯತೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದರು.
ದುಬೈನಲ್ಲಿ ನಡೆಯುತ್ತಿರುವ ‘ವಿಶ್ವ ಸರ್ಕಾರ ಶೃಂಗ’ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಶ್ವಾದ್ಯಂತ ಸರ್ಕಾರಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಜೊತೆಯಲ್ಲೇ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ನೆರವಾಗುವ ಅಂಶ ಪ್ರತಿಪಾದಿಸಿದರು.
ಶೃಂಗ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಯಾದ್ ಅವರ ನಾಯಕತ್ವ ಹಾಗೂ ದೂರದೃಷ್ಟಿ ಪ್ರಧಾನಿ ಮೋದಿ ಹಾಡಿ ಹೊಗಳಿದರು.ಇಂದಿನ ದಿನಗಳಲ್ಲಿ ವಿಶ್ವಕ್ಕೆ ಸ್ಮಾರ್ಟ್ ಸರ್ಕಾರ ಬೇಕಿದೆ. ಸರ್ಕಾರ ನಡೆಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದರು.
ಪಾರದರ್ಶನ ಹಾಗೂ ಭ್ರಷ್ಟಾಚಾರ ಮುಕ್ತ ಸರ್ಕಾರವು ಇಂದಿನ ವಿಶ್ವದ ಅಗತ್ಯತೆಯಾಗಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.ಒಂದೆಡೆ ವಿಶ್ವದಲ್ಲಿ ಆಧುನೀಕತೆ ಹಾಗೂ ತಂತ್ರಜ್ಞಾನಗಳ ವೃದ್ದಿ ಆಗುತ್ತಿದ್ದು, ಮತ್ತೊಂದೆಡೆ ಜಾಗತಿಕ ಮಟ್ಟದಲ್ಲಿ ಸವಾಲುಗಳು ಹೆಚ್ಚುತ್ತಲೇ ಇವೆ ಎಂದು ತಿಳಿಸಿದರು.
ಕಳೆದ ಶತಮಾನಕ್ಕಿಂತಲೂ ಈ ಶತಮಾನದಲ್ಲಿ ಸವಾಲುಗಳು ಹೆಚ್ಚಾಗುತ್ತಿದ್ದು, ಆಹಾರ ಭದ್ರತೆ, ಆರೋಗ್ಯ ಭದ್ರತೆ, ನೀರಿನ ಭದ್ರತೆ, ಇಂದಿನ ಭ್ರತೆ, ಶಿಕ್ಷಣ ಹಾಗೂ ಉತ್ತಮ ಸಮಾಜ ನಿರ್ಮಾಣದ ಸವಾಲುಗಳು ಎಲ್ಲ ಸರ್ಕಾರಗಳ ಎದುರು ಇವೆ. ವಿಶ್ವದ ಪ್ರತಿ ಸರ್ಕಾರವೂ ತಮ್ಮ ಪ್ರಜೆಗಳ ಹಿತಕ್ಕಾಗಿ ಶ್ರಮಿಸಬೇಕಾದ್ದು ಅತಿ ದೊಡ್ಡ ಜವಾಬ್ದಾರಿ ಎಂದು ಸೂಚಿಸಿದರು.