ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಟೀಕೆ ಮಾಡಿ ಟ್ವೀಟ್ ಮಾಡಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ‘ಪ್ರಧಾನಿಯ ಗಾಢ ನಿದ್ರೆ ಕರ್ನಾಟಕದ ಅಭಿವೃದ್ಧಿಗೆ ಪ್ರಮುಖ ತೊಂದ್ರೆ’ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ಮೂಲಕ ನಿಮ್ಮ ಹೈಕಮಾಂಡ್ ದೊರೆಗಳನ್ನು ಮೆಚ್ಚಿಸಿ ಅಲುಗಾಡುತ್ತಿರುವ ತಮ್ಮ ಕುರ್ಚಿ ಉಳಿಸಿಕೂಳ್ಳಬಹುದು ಎಂಬ ಕನಸು ಕಾಣಬೇಡಿ. ತಾವು ಎಷ್ಟೇ ಹಾರಾಡಿದರೂ, ಚೀರಾಡಿದರೂ ಲೋಕಸಭೆ ಚುನಾವಣೆವರೆಗೆ ಮಾತ್ರ ತಮ್ಮ ಕುರ್ಚಿ ಭದ್ರ ಎಂಬುದು ಈಗ ಗುಟ್ಟಾಗಿ ಏನು ಉಳಿದಿಲ್ಲ’ ಎಂದಿದ್ದಾರೆ.
ಇಡೀ ವಿಶ್ವವೇ ಮೆಚ್ಚಿರುವ, ಇಡೀ ದೇಶವೇ ಪ್ರೀತಿಸುವ ಅದ್ವಿತೀಯ ನಾಯಕ ನಮ್ಮ ಪ್ರಧಾನಿ ಮೋದಿ ಅವರು. ಅವರ ಶಿಸ್ತಿನ ಜೀವನ, ಪರಿಶ್ರಮದ ಸ್ವಭಾವ, ಹಿಡಿದ ಕೆಲಸ ಮಾಡಿ ಮುಗಿಸುವ ಬದ್ಧತೆ ಇವೆಲ್ಲವೂ ಈ ದೇಶದ ಸಣ್ಣ ಮಕ್ಕಳಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.
ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ಅಹುದೇನಬೇಕು! ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯ ? ಎಂಬ ಬಸವಣ್ಣನ ವಚನವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ದು,ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ‘ ಸೂರ್ಯ ಮುಳುಗಿದರೆ ಕತ್ತಲೆ, ಚಂದ್ರ ಮೇಲೆದ್ದು ಬಂದರೆ ನಿದ್ರೆ. ಸೂರ್ಯ- ಚಂದ್ರರಿಬ್ಬರೂ ವಿಶ್ರಾಂತಿ, ಸುಖ ನಿದ್ರೆಗಳನ್ನು ಅನುಭವಿಸಿರಬಹುದು, ಆದರೆ ತಮ್ಮ ಬದುಕಿನ ಪುಟದಲ್ಲಿ ವಿರಮಿಸುವ ಪದವನ್ನೇ ಕಾಣದ, ನಿದ್ರೆ ಸುಖವೇನೆಂದು ಅರಿಯದ ಒಬ್ಬ ತಪಸ್ವಿ ಆಡಳಿತಗಾರನನ್ನು ಈ ದೇಶ ಕಂಡಿದ್ದರೆ ಅದು ಪ್ರಧಾನಿ ನರೇಂದ್ರ ಮೋದಿಯವರು ಮಾತ್ರ, ಎನ್ನುವುದು ಅವರ ಜೀವನ ಚರಿತ್ರೆ ಹಾಗೂ ಹತ್ತು ವರ್ಷದ ಅವರ ಆಡಳಿತವನ್ನು ಕಣ್ಣಾರೆ ಕಂಡಿರುವ ಶತಕೋಟಿ ಭಾರತೀಯರು ಎದೆ ತಟ್ಟಿ ಹೇಳುತ್ತಾರೆ ‘ಎಂದಿದ್ದಾರೆ. ಮಾಹಿತಿ ಕಂಡು ಬಂದಿದೆ.