ಉತ್ತರ ಪ್ರದೇಶ : ರಾಜ್ಯದ ರಾಯ್‌ಬರೇಲಿ ಸದರ್ ಅಸೆಂಬ್ಲಿ ಕ್ಷೇತ್ರದ ಬಿಜೆಪಿ ಶಾಸಕಿ ಅದಿತಿ ಸಿಂಗ್, ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ವಿರುದ್ದ ಗುರುತರ ಆರೋಪವನ್ನು ಮಾಡಿದ್ದು, ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅದಿತಿ ಸಿಂಗ್, ಪ್ರಿಯಾಂಕ ವಿರುದ್ದ ಆರೋಪಗಳ ಸುರಿಮಳೆಗೈದಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನನ್ನ ಮಾಜಿ ಪತಿ ಅಂಗದ್ ಸೈನಿಯನ್ನು ಸಂಪರ್ಕಿಸಿದ ಪ್ರಿಯಾಂಕ ಗಾಂಧಿ, ನನ್ನ ಶೀಲದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವಂತೆ ಸೂಚಿಸಿದ್ದು, ” ಎನ್ನುವ ಆರೋಪವನ್ನು ಅದಿತಿ ಸಿಂಗ್ ಮಾಡಿದ್ದು, ಎಎನ್‌ಐ ಸಂಸ್ಥೆಯ ಸ್ಮಿತಾ ಪ್ರಕಾಶ್ ಜೊತೆಗಿನ ಈ ಸಂದರ್ಶನ ಬುಧವಾರ ಪ್ರಸಾರಗೊಂಡಿದೆ. ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಕೂಡಾ ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅದಿತಿ ಸಿಂಗ್, ಇದರ ವಿಡಿಯೋ ತುಣುಕನ್ನು ತಮ್ಮ ಎಕ್ಸ್ ಅಕೌಂಟಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಪ್ರಸಕ್ತ ರಾಯ್‌ಬರೇಲಿ ಕ್ಷೇತ್ರದ ಬಿಜೆಪಿ ಶಾಸಕಿಯಾಗಿರುವ ಅದಿತಿ ಸಿಂಗ್, 2017ರ ಅಸೆಂಬ್ಲಿ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿಯಾಗಿ ಆಯ್ಕೆಯಾಗಿದ್ದರು. ನವೆಂಬರ್ 2021ರಲ್ಲಿ ಅದಿತಿ ಸಿಂಗ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈ ಕ್ಷೇತ್ರವು ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಸೆಂಬ್ಲಿ ಸೀಟ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೊಡ್‌ಕಾಸ್ಟ್ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ” ದುರದೃಷ್ಟವಶಾತ್ ನಾವು ವಿಚ್ಛೇದನವನ್ನು ಪಡೆದಿದ್ದೇವೆ. ಟಿಕೆಟ್ ಹಂಚಿಕೆಯ ನಿರ್ಣಾಯಕ ಘಟ್ಟದಲ್ಲಿ ಪ್ರಿಯಾಂಕಾ ಗಾಂಧಿ ನನ್ನ ಮಾಜಿ ಪತಿಗೆ ಹೇಳುತ್ತಾರೆ, ನೀನು ಅವಳ ಶೀಲವನ್ನು ಕೆಟ್ಟದಾಗಿ ಬಿಂಬಿಸು, ಕಾಂಗ್ರೆಸ್ ಟಿಕೆಟ್ ಪಡೆದುಕೋ ” ಎಂದು ಅದಿತಿ ಸಿಂಗ್ ಹೇಳಿರುವುದು ಪೊಡ್‌ಕಾಸ್ಟ್ ನಲ್ಲಿದೆ ಎಂದು ತಿಳಿಸಿದರು.