ಆಲಮಟ್ಟಿ: ಮಳೆ ಕೊರತೆಯಿಂದ ಜಿಲ್ಲಾದ್ಯಂತ ಬರ ಪರಿಸ್ಥಿತಿ ಮುಂದುವರೆದಿದೆ. ಇನ್ನೂ ಕಾಲುವೆ ನೀರನ್ನು 10 ದಿನಗಳ ಕಾಲ ಬಂದ್ ಮಾಡುವುದರಿಂದ ಕಾಲುವೆ ಜಾಲದಲ್ಲೂ ಬರ ಸೃಷ್ಟಿಯಾಗುವ ಆತಂಕ ರೈತರಲ್ಲಿ ಮೂಡಿದೆ.
ಆಲಮಟ್ಟಿಯ ಕೆಬಿಜೆನ್ನೆಲ್ ಎಂಡಿ ಕಚೇರಿ ಸಭಾಂಗಣದಲ್ಲಿ ಐಸಿಸಿ ಅಧ್ಯಕ್ಷ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ 2023-24ನೇ ಸಾಲಿನ ಮುಂಗಾರು ಹಂಗಾಮಿನ ಕೃಷ್ಣಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಡಿ 6.67 ಲಕ್ಷ ಹೆಕ್ಟೇರ್ ಕ್ಷೇತ್ರದಲ್ಲಿ 5.34 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ 14 ದಿನ ಚಾಲೂ 10 ದಿನ ಬಂದ್ ಪದ್ಧತಿಯನ್ನು ಅನುಸರಿಸಲು ನಿರ್ಣಯಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದೆ. ಕಾಲುವೆ ಜಾಲಕ್ಕೆ ಜು.27ರಿಂದ ನೀರು ಹರಿಸಲು ಆರಂಭಿಸಿದ ನಂತರ ಬಿತ್ತನೆ ಆರಂಭವಾಗಿದೆ. ಜುಲೈ ಮೂರನೇ ವಾರದಿಂದ ಇದುವರೆಗೆ ಮಳೆಯ ಸುಳಿವೂ ಇಲ್ಲವಾಗಿದೆ. ಹೀಗಾಗಿ ಬಿತ್ತನೆ ಮಾಡಿದ ಪ್ರದೇಶಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿದೆ.
ಈ ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತದೆ. ಈರುಳ್ಳಿಗೆ ಕನಿಷ್ಠ 5 ದಿನಗಳಿಗೊಮ್ಮೆ ಕಡ್ಡಾಯವಾಗಿ ನೀರೂಣಿಸಬೇಕು. ಇಲ್ಲವಾದಲ್ಲಿ ನಿಗದಿತ ಪ್ರಮಾಣದಲ್ಲಿ ಇಳುವರಿ ಬಾರದೆ ರೈತರಿಗೆ ಹಾನಿಯಾಗುತ್ತದೆ. ಇನ್ನೂ ಹತ್ತಿ, ಮೆಣಸಿನಕಾಯಿ ಮತ್ತು ಮೆಕ್ಕೆಜೋಳಕ್ಕೆ ಕನಿಷ್ಠ 8 ದಿನಕ್ಕೊಮ್ಮೆ ನೀರು ಹರಿಸಬೇಕು. 10 ದಿನಗಳ ಕಾಲ ನೀರು ಬಂದ್ ಮಾಡುವುದರಿಂದ ಈರುಳ್ಳಿ, ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ, ಸಜ್ಜೆ ಸೇರಿದಂತೆ ನಾನಾ ಬೆಳೆಗಳ ಇಳುವರಿ ಕುಸಿತವಾಗಿ ಆರ್ಥಿಕವಾಗಿ ಹಿನ್ನಡೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ 12 ದಿನ ಚಾಲೂ 6 ದಿನ ಬಂದ್ ಪದ್ಧತಿ ಅನುಸರಿಸಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.
ವಾರಾಬಂದಿ ಪದ್ಧತಿ ಕುರಿತು ಅಧಿಕಾರಿಗಳನ್ನು ವಿಚಾರಿಸಿದರೆ ಕಳೆದ ನಾಲ್ಕು ವರ್ಷಗಳಿಂದ ಇದೇ ಪದ್ಧತಿ ಅನುಸರಿಸುತ್ತಿದ್ದೇವೆ. ಈ ಬಾರಿ ಯಾಕೆ ಪ್ರಶ್ನಿಸುತ್ತಿದ್ದಿರಿ ಎಂದು ಕೇಳುತ್ತಾರೆ.
ಮಳೆಯಾಗುತ್ತಿದ್ದರೆ ಕಾಲುವೆ ನೀರು ಹೆಚ್ಚು ಬಳಕೆಯಾಗುವುದಿಲ್ಲ. ಈ ಬಾರಿ ಮುಂಗಾರು ಸಂಪೂರ್ಣ ಕೈಕೊಟ್ಟಿದೆ ಹೀಗಾಗಿ ಹೆಚ್ಚು ದಿನ ನೀರು ಕೊಡದಿದ್ದರೆ ಯಾವ ಬೆಳೆಯೂ ನಮ್ಮ ಕೈಹಿಡಿಯುವುದಿಲ್ಲ ಎನ್ನುತ್ತಾರೆ ಕಾಲುವೆ ಜಾಲದ ರೈತರು.
ಅವೈಜ್ಞಾನಿಕ ವಾರಾಬಂದಿ ಬದಲಾಯಿಸಿ 10 ದಿನ ಚಾಲೂ 3 ದಿನ ಬಂದ್ ಪದ್ಧತಿ ಅನುಸರಿಸಬೇಕು. ಬಸವನಬಾಗೇವಾಡಿ ತಾಲೂಕಿನ ಕೆರೆ ಭರ್ತಿಗೆ ಪೈಪ್‌ಲೈನ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು ಹಾಗೂ ಆಲಮಟ್ಟಿಗೆ ಕೆಬಿಜೆನ್ನೆಲ್ ಎಂಡಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಆ.25ರಿಂದ ಅಹೋರಾತ್ರಿ ಧರಣಿ ನಡೆಸಲಾಗುವುದು.
-ಅರವಿಂದ ಕುಲಕರ್ಣಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಖಂಡ ಕರ್ನಾಟಕ ರೈತ ಸಂಘ
ಮಳೆಯಾಗದ ಕಾರಣ ಬೆಳೆಗಳು ಸರಿಯಾಗಿ ಬರುತ್ತಿಲ್ಲ. ಇನ್ನೂ ಕಾಲುವೆ ನೀರನ್ನು 10 ದಿನಗಳ ಕಾಲ ಬಂದ್ ಮಾಡಿದರೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ. 14 ದಿನ ಚಾಲೂ 6 ದಿನ ಬಂದ್ ಪದ್ದತಿ ಅನುಸರಿಸಿದರೆ ಒಳ್ಳೆಯದು.
-ಸಾಬಣ್ಣ ಅಂಗಡಿ, ರೈತ ಮುಖಂಡ