This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ

ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ
340. ಕರ್ನಾಟಕ ರಾಜ್ಯವು ಸಾಂಸ್ಕೃತಿಕವಾಗಿ, ನೈಸರ್ಗಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಈ ಸಂಪನ್ಮೂಲಗಳನ್ನು ಅತ್ಯಂತ ಸಮರ್ಥವಾಗಿ, ಸುಸ್ಥಿರವಾಗಿ ಬಳಸಲು ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ.
341. ನಮ್ಮ ನಾಡು, ನುಡಿ, ಸಂಸ್ಕೃತಿ ಬಿಂಬಿಸಲು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾವೇರಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
342. ಕರ್ನಾಟಕದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯನ್ನು ಹಾಗೂ ಉಡುಪಿ ಜಿಲ್ಲೆಯಲ್ಲಿ ಯಕ್ಷರಂಗಾಯಣವನ್ನು ಸ್ಥಾಪಿಸಲಾಗಿದೆ.
343. ಕರ್ನಾಟಕ ರಾಜ್ಯದ ಕನ್ನಡ ಮಾತೆಯಾದ ʻಶ್ರೀ ಭುವನೇಶ್ವರಿʼ ತಾಯಿಯ ಬೃಹತ್‌ ಮೂರ್ತಿ ಹಾಗೂ ಥೀಮ್‌ ಪಾರ್ಕ್‌ ಅನ್ನು ಬೆಂಗಳೂರು ನಗರದಲ್ಲಿ ಅಭಿವೃದ್ಧಿಪಡಿಸಲಾಗುವುದು.
344. ʻನಮ್ಮ ಜಿಲ್ಲೆ ನಮ್ಮ ಸಂಸ್ಕೃತಿʼ ಎಂಬ ಕಾರ್ಯಕ್ರಮದಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಎಲ್ಲಾ ವರ್ಗದ ಸ್ಥಳೀಯ ಕಲಾವಿದರನ್ನು ಒಳಗೊಂಡಂತೆ ಜಾನಪದ ಹಬ್ಬವನ್ನು ಆಯೋಜನೆ ಮಾಡಲಾಗುವುದು.
345. ಗಡಿನಾಡು ಪ್ರದೇಶದಲ್ಲಿ ಕನ್ನಡ ಭಾಷೆ, ಕಲೆ, ಶಿಕ್ಷಣ ಮತ್ತು ಸಂಸ್ಕೃತಿಯ ವಿಕಾಸಕ್ಕೆ ಪ್ರಾಶಸ್ತ್ಯವನ್ನು ನೀಡಲಾಗುವುದು. ಹಾಗೆಯೇ ಗಡಿ ಪ್ರದೇಶದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮುಖಾಂತರ 150 ಕೋಟಿ ರೂ. ಒದಗಿಸಲಾಗುವುದು.
346. ಕರ್ನಾಟಕ ಜಗತ್ತಿನೆಲ್ಲೆಡೆ ಒಂದು ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಕನ್ನಡವನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೆಮ್ಮೆಯ ಕನ್ನಡಿಗರನ್ನು ಒಳಗೊಂಡ 3ನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು.
347. ಬೆಂಗಳೂರಿನ ಸಂಸ್ಕೃತಿ ಹಾಗೂ ಧಾರ್ಮಿಕ ಶ್ರದ್ಧೆಯ ಅವಿಭಾಜ್ಯ ಅಂಗವಾಗಿರುವ ಕರಗ ಉತ್ಸವ ಆಚರಣೆಗೆ ಸರ್ಕಾರದಿಂದ ವಿಶೇಷ ಅನುದಾನವನ್ನು ಒದಗಿಸಲಾಗುವುದು.
348. ಆಡಳಿತದಲ್ಲಿ, ಕೈಗಾರಿಕೋದ್ಯಮಗಳಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಕನ್ನಡದ ವ್ಯಾಪಕ ಬಳಕೆಗಾಗಿ ಹಾಗೂ ಕನ್ನಡಿಗರ ಹಿತಾಸಕ್ತಿಯ ರಕ್ಷಣೆಗಾಗಿ ʻಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಅಧಿನಿಯಮʼ ವನ್ನು ಜಾರಿಗೆ ತರಲಾಗುವುದು.
349. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಮಹನೀಯರ ಬದುಕು ಮತ್ತು ಸಾಧನೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವರ ಜೀವನಗಾಥೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗುವುದು.
350. ನಾಡು ನುಡಿ ಸಂಸ್ಕೃತಿ ಕುರಿತು ಅಮೂಲ್ಯ ಕೃತಿಗಳನ್ನು ಪ್ರಕಟಿಸುತ್ತಿರುವ ಕನ್ನಡ ಪುಸ್ತಕ ಪ್ರಾಧಿಕಾರದ ಚಟುವಟಿಕೆಗಳಿಗೆ
2 ಕೋಟಿ ರೂ. ನೆರವು ನೀಡಲಾಗುವುದು.
351. ದೇಶವನ್ನು ಆಳಿದ ಗಂಗ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ ಮತ್ತಿತರ ಕನ್ನಡದ ರಾಜವಂಶಗಳ ಇತಿಹಾಸ ಹಾಗೂ ಕೊಡುಗೆಗಳ ಬಗ್ಗೆ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಅಧ್ಯಯನ ಮಾಡಲಾಗುವುದು.
352. ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ಹಾಗೂ ಇಂದಿಗೂ ಕನ್ನಡ ನಾಡು-ನುಡಿಯ ಸೇವೆಯಲ್ಲಿ ಸಕ್ರಿಯವಾಗಿರುವ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಚಟುವಟಿಕೆಗಳಿಗೆ ನೆರವು ನೀಡಲಾಗುವುದು.
353. ಯುವಜನರ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಯುವ ನೀತಿ 2022 ಅನ್ನು ರೂಪಿಸಲಾಗಿದೆ. ಗ್ರಾಮೀಣ ಯುವಕರ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸಲು 2022-23ನೇ ಸಾಲಿನಲ್ಲಿ
ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾದ ಸ್ವಾಮಿ ವಿವೇಕಾನಂದ ಯುವಕರ ಜಂಟಿ ಬಾಧ್ಯತಾ ಗುಂಪುಗಳಿಗೆ ತಲಾ 10,000
ರೂ. ನಂತೆ ಸುತ್ತುನಿಧಿ ಹಾಗೂ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಒಂದು ಲಕ್ಷ ರೂ. ಒಳಗೊಂಡಂತೆ ಬ್ಯಾಂಕ್‌ಗಳ ಸಹಾಯದೊಂದಿಗೆ 5 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುವುದು.
354. ʻಬದುಕುವ ದಾರಿʼ ಎಂಬ ಹೊಸ ಯೋಜನೆಯಡಿ ಶಾಲಾ ಶಿಕ್ಷಣದ ನಂತರ ವಿವಿಧ ಕಾರಣಗಳಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೇ ಇರುವ ಯುವಜನರಿಗೆ ಐಟಿಐಗಳಲ್ಲಿ 3 ತಿಂಗಳ ಅವಧಿಯ ವೃತ್ತಿಪರ ಸರ್ಟಿಫಿಕೇಟ್ ತರಬೇತಿ ಪಡೆಯಲು ಮಾಸಿಕ 1,500 ರೂ. ಗಳ ಶಿಷ್ಯವೇತನವನ್ನು ನೀಡಲಾಗುವುದು. ಈ ತರಬೇತಿಯನ್ನು ಪೂರ್ಣಗೊಳಿಸಿರುವವರಿಗೆ Apprenticeship ಕಾರ್ಯಕ್ರಮದಡಿಯಲ್ಲಿ 3 ತಿಂಗಳಿಗೆ ಮಾಸಿಕ 1,500 ರೂ. ಗಳ ಶಿಶಿಕ್ಷು ಭತ್ಯೆಯನ್ನು ನೀಡಲಾಗುವುದು.
355. ಪದವಿ ಶಿಕ್ಷಣವನ್ನು ಮುಗಿಸಿ, ಮೂರು ವರ್ಷಗಳ ನಂತರವೂ ಯಾವುದೇ ಉದ್ಯೋಗ ದೊರೆಯದ ಯುವಕರಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಲು ʻಯುವಸ್ನೇಹಿʼ ಎಂಬ ಹೊಸ ಯೋಜನೆಯಡಿ ತಲಾ 2,000 ರೂ. ಗಳ ಒಂದು ಬಾರಿಯ ಆರ್ಥಿಕ ನೆರವು ನೀಡಲಾಗುವುದು.
356. ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣ, ಮಂಡ್ಯ ಮತ್ತು ಉಡುಪಿ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸುಸಜ್ಜಿತ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
357. ಮುಂದಿನ ವರ್ಷಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಕ್ರೀಡಾಂಗಣಗಳ ಸಮಗ್ರ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಈ ಕ್ರೀಡಾಂಗಣಗಳಲ್ಲಿ ಮಹಿಳೆಯರು ಮತ್ತು ವಿಶೇಷಚೇತನರಿಗೆ ಸೂಕ್ತ ಸೌಕರ್ಯಗಳು ಹಾಗೂ ಯುವಜನರಿಗೆ ಹೊರಾಂಗಣ ಜಿಮ್‌ ಸೌಲಭ್ಯಗಳನ್ನು ಒದಗಿಸಲಾಗುವುದು. ಈ ಉದ್ದೇಶಕ್ಕಾಗಿ ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.
358. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವ ಅಧಿಕೃತವಾಗಿ ನೋಂದಣಿಯಾಗಿರುವ ಖಾಸಗಿ ಕ್ರೀಡಾ ಸಂಸ್ಥೆಗಳಿಗೆ 25 ಲಕ್ಷ ರೂ. ಗಳವರೆಗೆ ಪ್ರೋತ್ಸಾಹಧನವನ್ನು ನೀಡಲಾಗುವುದು.
359. ಬಾಸ್ಕೆಟ್‌ ಬಾಲ್‌ ಮತ್ತು ವಾಲಿ ಬಾಲ್ ಕ್ರೀಡೆಗಳನ್ನು ಹೆಚ್ಚಿನ ಸಂಖ್ಯೆಯ ಮಕ್ಕಳಿಗೆ ಪರಿಚಯಿಸಲು ಹೊಸ ಅಂಕಣಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ನಿರ್ಮಿಸಲಾಗುವುದು.
360. ಗ್ರಾಮೀಣ ಮತ್ತು ಸಾಂಪ್ರದಾಯಿಕ ಕ್ರೀಡೆಗಳಾದ ಖೋ-ಖೋ, ಕುಸ್ತಿ, ಕಬಡ್ಡಿ, ಕಂಬಳ, ಎತ್ತಿನಗಾಡಿ ಓಟ ಮುಂತಾದವುಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸಲು ಮತ್ತು ಉತ್ತೇಜಿಸಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸಲಾಗುವುದು. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸುಸಜ್ಜಿತವಾದ ಕ್ರೀಡಾ ಅಂಕಣವನ್ನು ನರೇಗಾ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
361. ರಾಜ್ಯದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಐದು ಯುವ ಜನರಿಗೆ ಪ್ರಸಕ್ತ ಸಾಲಿನಿಂದ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ನೀಡಲಾಗುವುದು.
362. ಒಲಿಂಪಿಕ್ಸ್ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಪದಕ ಪಡೆಯುವ ಉದ್ದೇಶಕ್ಕೆ ಅತ್ಯುನ್ನತ ತರಬೇತಿ ಹಾಗೂ ಸಲಕರಣೆಗಳನ್ನು ಪಡೆಯಲು ಅನುವಾಗುವಂತೆ 50 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಒಲಿಂಪಿಕ್ ಕನಸಿನ ಯೋಜನಾ
ನಿಧಿ (Karnataka Olympic Dream Project Fund) ಸ್ಥಾಪಿಸಲಾಗುವುದು. ಈ ಯೋಜನೆಯಡಿ 12 ರಿಂದ 19 ವರ್ಷ ವಯೋಮಾನದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಯುವ ಪ್ರತಿಭಾವಂತ ಕ್ರೀಡಾಪಟುಗಳ ಪ್ರಾಯೋಜನೆ ಮಾಡಲಾಗುವುದು.
363. ಶ್ರೀ ಆಂಜನೇಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸಿಗಳಿಗೆ ಮೂಲಸೌಕರ್ಯ ಒದಗಿಸಲು 100 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಒಳಗೊಂಡ ವಿಸ್ತೃತವಾದ ಯೋಜನೆಯನ್ನು ತಯಾರಿಸಿ, ಟೆಂಡರ್‌ ಕರೆಯಲಾಗಿದೆ.
364. ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾದ C.R.Z ಮಾನದಂಡಗಳನ್ನು ಸಡಿಲಗೊಳಿಸುವುದಕ್ಕೆ ಕೇಂದ್ರ ಸರ್ಕಾರವು ಒಪ್ಪಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ವಲಯ ನಿರ್ವಹಣೆ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಧಾರ್ಮಿಕ, ಸಾಹಸ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೂಪುರೇಷೆಗಳನ್ನು ತಯಾರಿಸಲಾಗುವುದು.
365. ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ʻಪ್ರಸಾದ್ʼ ಯೋಜನೆಯಡಿ ಮೈಸೂರು ನಗರದ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಹಾಗೂ ಸ್ವದೇಶ್ ದರ್ಶನ್ 2.0 ಅಡಿಯಲ್ಲಿ ಹಂಪಿಯ ಸ್ಮಾರಕ ಅಭಿವೃದ್ಧಿ ಮತ್ತು ಮೈಸೂರಿನ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶಾಶ್ವತ ಸೌಲಭ್ಯಗಳ ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ.
366. ರಾಮನಗರದ ರಾಮದೇವರ ಬೆಟ್ಟದಲ್ಲಿ ಒಂದು ಭವ್ಯವಾದ ರಾಮಮಂದಿರವನ್ನು ನಿರ್ಮಿಸಲಾಗುವುದು.
367. ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಐತಿಹಾಸಿಕ ಕುರುಹುಗಳಿರುವ ತಾಣಗಳ ಪ್ರವಾಸಿ ಸರ್ಕಿಟ್ ಒಂದನ್ನು ಈ ವರ್ಷದಲ್ಲಿ ಪ್ರಾರಂಭಿಸಲಾಗುವುದು.
368. ಸಂತ ಸೇವಾ ಲಾಲ್‌ ರವರ ಜನ್ಮಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ಸೌಲಭ್ಯವನ್ನು 5 ಕೋಟಿ ರೂ. ಗಳ ವೆಚ್ಚದಲ್ಲಿ ಕಲ್ಪಿಸಲಾಗುವುದು.
369. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ಮಹಾರಾಜ್ ಸಮಾಧಿ ಸ್ಥಳವನ್ನು 5 ಕೋಟಿ ರೂ. ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ಮೂಲಸೌಲಭ್ಯ ಕಲ್ಪಿಸಲಾಗುವುದು.
370. ಹಾವೇರಿ ಜಿಲ್ಲೆಯ ಬಂಕಾಪುರದಲ್ಲಿ 12ನೇ ಶತಮಾನದಲ್ಲಿ ನಿರ್ಮಿಸಲಾದ ಐತಿಹಾಸಿಕ 101 ಕಂಬಗಳ ನಗರೇಶ್ವರ ದೇವಸ್ಥಾನದ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲಾಗುವುದು.
371. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಪ್‌-ವೇ ನಿರ್ಮಾಣ ಕಾಮಗಾರಿಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.
372. ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 398 ನೋಂದಾಯಿತ ಪ್ರವಾಸಿ ಮಾರ್ಗದರ್ಶಿಗಳಿಗೆ ಆಯವ್ಯಯದಲ್ಲಿ ಘೋಷಿಸಿದಂತೆ ನೀಡಲಾಗುತ್ತಿರುವ 2,000 ರೂ. ಪ್ರೋತ್ಸಾಹಧನವನ್ನು 5,000 ರೂ. ಗಳಿಗೆ ಹೆಚ್ಚಿಸಿ ಒಟ್ಟು 1.10 ಕೋಟಿ ರೂ. ನೀಡಲಾಗಿದೆ.
373. ಕರ್ನಾಟಕದ ಇತಿಹಾಸ ಮತ್ತು ಕಲೆಯ ಶ್ರೀಮಂತಿಕೆಯನ್ನು ಬಿಂಬಿಸುವ ಹಂಪಿಯ ವಿಜಯವಿಠಲ ದೇವಾಲಯ ಮತ್ತು ಪುರಂದರ ಮಂಟಪ, ವಿಜಯಪುರದ ಗೋಲ್ ಗುಂಬಜ್, ಚಿಕ್ಕಬಳ್ಳಾಪುರ ಜಿಲ್ಲೆಯ ಭೋಗನಂದೀಶ್ವರ ದೇವಾಲಯ, ಬಾದಾಮಿ ಗುಹೆಗಳು, ಕಿತ್ತೂರು ಹಾಗೂ ಬೀದರ್ ಕೋಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಸ್ಥಳಗಳಲ್ಲಿ ಅತ್ಯಾಧುನಿಕ ಬೆಳಕಿನ ವ್ಯವಸ್ಥೆ, 3D projection mapping, ಧ್ವನಿ ಮತ್ತು ಬೆಳಕು ಪ್ರದರ್ಶನಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ 2023-24 ರಲ್ಲಿ 60 ಕೋಟಿ ರೂ. ಗಳನ್ನು ಒದಗಿಸಲಾಗುವುದು.
374. ರಾಜ್ಯದಲ್ಲಿನ ವಿವಿಧ ಸ್ಮಾರಕಗಳನ್ನು 3ಡಿ ಮ್ಯಾಪಿಂಗ್‌ ಮತ್ತು ಲೇಸರ್‌ ಸ್ಕ್ಯಾನಿಂಗ್‌ ಮೂಲಕ ಡಿಜಿಟಲೀಕರಿಸುವ ಕಾರ್ಯವನ್ನು ಪೂರ್ಣಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. Adopt a Monument ಯೋಜನೆಯಡಿ ಕೊಪ್ಪಳ ಜಿಲ್ಲೆಯ ಆನೆಗುಂದಿಯ ಗಗನ್‌ ಮಹಲ್‌ ಮತ್ತು ವಿಜಯಪುರ ನಗರದ ತಾಜ್‌ ಬಾವಡಿ ಸ್ಮಾರಕಗಳ ಸಂರಕ್ಷಣೆಗೆ ಖಾಸಗಿ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ.
375. ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳಲಾಗುವುದು.
376. ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಬಳಿ ಎರಡೂವರೆ ಎಕರೆ ಜಾಗದಲ್ಲಿ ಅಂತರಾಷ್ಟ್ರೀಯ ಮಟ್ಟದ ರಾಜ್ಯ ವಸ್ತುಸಂಗ್ರಹಾಲಯ ಮತ್ತು ಕಲಾ ಗ್ಯಾಲರಿಯನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.
377. ಕಿತ್ತೂರು ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ ಹಾಗೂ ಬೆಳವಡಿ ಮಲ್ಲಮ್ಮರ ಸಾಲಿಗೆ ಸೇರುವ ಮತ್ತೊಬ್ಬ ಧೀರ ವನಿತೆ ರಾಣಿ ಚೆನ್ನಭೈರಾದೇವಿ ಅವರ ಹೆಸರನ್ನು ಶಾಶ್ವತಗೊಳಿಸಲು ಹೊನ್ನಾವರದಲ್ಲಿ ʻಚೆನ್ನಭೈರಾದೇವಿ ಸ್ಮಾರಕ ಉದ್ಯಾನʼ ನಿರ್ಮಾಣ ಮಾಡಲಾಗುವುದು.
378. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ʻರೋರಿಚ್ ಮತ್ತು ದೇವಿಕಾರಾಣಿ ಎಸ್ಟೇಟ್‌ʼನಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.
379. ರಾಮನಗರ ಜಿಲ್ಲೆಯ ಮಂಚನಬೆಲೆ ಜಲಾಶಯದ ಹಿನ್ನೀರಿನಲ್ಲಿ
10 ಎಕರೆ ಪ್ರದೇಶದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ಲಿ. ಮೂಲಕ ಒಂದು ರೆಸಾರ್ಟ್ ನಿರ್ಮಿಸಲಾಗುವುದು.
380. ರಾಜ್ಯದಲ್ಲಿನ ಪಾರಂಪರಿಕ ತಾಣಗಳ ಪ್ರವಾಸಿ ಸರ್ಕ್ಯುಟ್ ಪ್ರಾರಂಭಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲೆಯಲ್ಲಿರುವ
ಸನ್ನತಿ-ಚಂದ್ರಲಾಂಬಾ ದೇವಾಲಯ ಹಾಗೂ ಗಾಣಗಾಪುರ ದತ್ತಾತ್ರೇಯ ದೇವಾಲಯ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬನವಾಸಿಯ ಮಧುಕೇಶ್ವರ ದೇವಾಲಯ ಸಂಕೀರ್ಣಗಳ ಸಮಗ್ರ ಅಭಿವೃದ್ಧಿಗಾಗಿ ಅನುದಾನ ಒದಗಿಸಲಾಗುವುದು.
381. ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿರುವ ಮಳಖೇಡ ಕೋಟೆ ಸಂರಕ್ಷಣೆ ಕಾಮಗಾರಿಯನ್ನು 20 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.
382. ಕರ್ನಾಟಕದ ಇತಿಹಾಸದ ಪ್ರಮುಖ ಘಟನಾವಳಿಗಳಲ್ಲಿ ತಾಳಿಕೋಟೆ ಯುದ್ಧವೂ ಸೇರಿದೆ. ಈ ಹಿನ್ನೆಲೆಯಲ್ಲಿ ರಕ್ಕಸಗಿ, ತಂಗಡಗಿ ಮತ್ತು ತಾಳಿಕೋಟೆ ಸುತ್ತಲಿನ ಐತಿಹಾಸಿಕ ಪ್ರಸಿದ್ಧ ತಾಣಗಳನ್ನು ಯುವಜನರಿಗೆ ಪರಿಚಯಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗುವುದು.
383. ಮಾನವ–ವನ್ಯಪ್ರಾಣಿ ಸಂಘರ್ಷದಿಂದ ಸಂಭವಿಸುವ ಮಾನವ ಪ್ರಾಣ ಹಾನಿಗೆ ನೀಡುವ ಪರಿಹಾರವನ್ನು 7.50 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗಳಿಗೆ ಹೆಚ್ಚಿಸಲಾಗಿದೆ. ಬೆಳೆಹಾನಿ ಪ್ರಕರಣಗಳಲ್ಲಿ ನೀಡುತ್ತಿರುವ ಪರಿಹಾರ ಧನವನ್ನೂ ದ್ವಿಗುಣಗೊಳಿಸಲಾಗಿದೆ,
384. ಮಾನವ-ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಲು, ಸಂಘರ್ಷ ಕ್ಷೇತ್ರದಿಂದ ಸೆರೆಹಿಡಿಯಲ್ಪಟ್ಟ ವನ್ಯಪ್ರಾಣಿಗಳನ್ನು, ಅವುಗಳ ನೈಸರ್ಗಿಕ ಆವಾಸ ಸ್ಥಾನ ಪ್ರದೇಶಗಳನ್ನು ಗುರುತಿಸಿ ಬಿಡುಗಡೆ ಮಾಡಲು ಭದ್ರಾ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ವನಗಳಲ್ಲಿ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
385. ಕಾಡಾನೆ ಹಾವಳಿ ತಡೆಗಟ್ಟಲು ಚಿಕ್ಕಮಗಳೂರು, ಹಾಸನ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕಾಡಾನೆ ಕಾರ್ಯಪಡೆಯನ್ನು ರಚಿಸಲಾಗಿದೆ. ಇದೇ ಮಾದರಿಯಲ್ಲಿ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಚಿರತೆ ದಾಳಿ ತಡೆಯಲು ಸಹ ಕಾರ್ಯಪಡೆಯನ್ನು ರಚಿಸಲಾಗಿದೆ. ಈ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹೆಚ್ಚುವರಿಯಾಗಿ 199 ಸಿಬ್ಬಂದಿಗಳನ್ನು ನೇಮಿಸಲು ಅನುಮೋದನೆ ನೀಡಲಾಗಿದೆ.
386. ಮಾನವ-ಆನೆ ಸಂಘರ್ಷವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ 72 ಕಿ.ಮೀ. ರೈಲ್ವೆ ಬ್ಯಾರಿಕೇಡ್, 36 ಕಿ.ಮೀ. ಆನೆ ನಿರೋಧಕ ಕಂದಕ, 186 ಕಿ.ಮೀ. ಸೌರಶಕ್ತಿ ಬೇಲಿ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. 2022-23ನೇ ಸಾಲಿನಲ್ಲಿ ಈ ಕಾಮಗಾರಿಗಳಿಗೆ 150 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ.
387. ಪ್ರಪ್ರಥಮ ಬಾರಿಗೆ ನಾನು 100 ಕೋಟಿ ರೂ. ಅನುದಾನದಲ್ಲಿ ಹಸಿರು ಆಯವ್ಯಯವನ್ನು (Eco Budget) ಘೋಷಿಸಿದ್ದೇನೆ. ಅದರಂತೆ ಪರಿಸರದ ಮೇಲೆ ಮಾನವ ನಿರ್ಮಿತ ಒತ್ತಡಗಳಿಂದ ಉಂಟಾದ ದುಷ್ಪರಿಣಾಮವನ್ನು ಸರಿದೂಗಿಸಲು ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಬೋಳುಗುಡ್ಡ ಪ್ರದೇಶಗಳ ಪುನಶ್ಚೇತನ, ಕ್ಷೀಣಿಸಿದ ಅರಣ್ಯ ಪ್ರದೇಶದ ಮರುಸ್ಥಾಪನೆ, ಕರಾವಳಿ ಪ್ರದೇಶದಲ್ಲಿ ಕಾಂಡ್ಲಾ ಅರಣ್ಯೀಕರಣ ಮತ್ತು ಶೆಲ್ಟರ್ ಬೆಲ್ಟ್ ನಿರ್ವಹಣೆ ಅಡಿಯಲ್ಲಿ 3,211 ಹೆಕ್ಟೇರ್‌ ಪ್ರದೇಶದಲ್ಲಿ ಹಾಗೂ ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ 168 ಕಿ.ಮೀ. ಉದ್ದದ ಅರಣ್ಯೀಕರಣ ಹಾಗೂ 25 ಲಕ್ಷ ಸಸಿಗಳನ್ನು ನೆಡುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.
388. ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನಕ್ಕೆ ನೆರವಾಗಲು ಹಾಗೂ ಸಮಗ್ರ ಪರಿಸರ ಅಭಿವೃದ್ಧಿಗೆ ಸಂಬಂಧಿಸಿದ ರೂಪುರೇಷೆಗಳನ್ನು ಸಿದ್ಧಪಡಿಸಲು ರಾಜ್ಯದ ಪ್ರಥಮ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸ್ಥಾಪಿಸಲಾಗುವುದು.
389. ಸಂಸ್ಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ವಲಯಕ್ಕೆ 2023-24ನೇ ಸಾಲಿನಲ್ಲಿ ಒಟ್ಟಾರೆಯಾಗಿ 3,458 ಕೋಟಿ ರೂ. ಅನುದಾನ ಒದಗಿಸಲಾಗಿದೆ.

Nimma Suddi
";