ರಾಹುಲ vs ಅಮಿತ್ ಶಾ
ಹೊಸದಿಲ್ಲಿ: ‘‘ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲಘಿ, ಹಂತಕರು,’’ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭೆಯಲ್ಲಿ ಅವಿಶ್ವಾಸ ನಿಲುವಳಿ ಮೇಲಿನ ಚರ್ಚೆ ಮೇಲೆ ಬುಧವಾರ ಮಾತನಾಡಿದ ರಾಹುಲ್ ಗಾಂಧಿ, ‘‘ಬಿಜೆಪಿಯವರು ದೇಶದ ಮೇಲೆ ದ್ವೇಷದ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಮೊದಲು ಮಣಿಪುರವನ್ನು ಸುಟ್ಟರು. ಬಳಿಕ ಹರಿಯಾಣಕ್ಕೂ ಅಗ್ನಿ ಸ್ಪರ್ಶ ಮಾಡಿದ್ದಾರೆ. ರಾಜಕೀಯ ಲಾಭಕ್ಕೆಘಿ, ಅಧಿಕಾರ ದಾಹಕ್ಕೆ ಇಡೀ ದೇಶವನ್ನು ಅಗ್ನಿಕುಂಡದಲ್ಲಿ ಹಾಕಿ ಸುಡುತ್ತಿದ್ದಾರೆ. ಇವರು ಭಾರತ ಮಾತೆಯ ರಕ್ಷಕರಲ್ಲ ಬದಲಾಗಿ ಹಂತಕರಾಗಿದ್ದಾರೆ’’ ಎಂದು ಖಾರವಾಗಿ ವಾಗ್ದಾಳಿ ನಡೆಸಿದರು.
‘‘ನಾನು ಮಣಿಪುರ ಎಂಬ ಪದವನ್ನು ಬಳಕೆ ಮಾಡಿದ್ದೇನೆ. ಸತ್ಯವೇನೆಂದರೆ ಇಂದು ಮಣಿಪುರ ಅಸ್ತಿತ್ವದಲ್ಲಿ ಉಳಿದಿಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರ ಮಣಿಪುರವನ್ನು ಇಬ್ಭಾಗ ಮಾಡಿವೆ. ಜನರ ನಡುವೆ ಕಂದಕ ಸೃಷ್ಟಿಸಿ ಮಣಿಪುರ ರಾಜ್ಯವನ್ನು ಛಿದ್ರಗೊಳಿಸಲಾಗಿದೆ,’’ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಮೋದಿ ಟಾರ್ಗೆಟ್: ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್ ಮಾಡಿದ ರಾಹುಲ್ ಗಾಂಧಿ, ‘‘ಮೂರು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಜನರ ನಡುವೆ ದ್ವೇಷದ ಬೆಂಕಿ ಹಚ್ಚಿರುವ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಅವರ ವೌನವೇ ದಿನೇದಿನೆ ಸ್ಫೂರ್ತಿಯಾಗುತ್ತಿದೆ. ಮೂರು ತಿಂಗಳಿಂದ ನಮ್ಮ ದೇಶದ ಒಂದು ಭಾಗ ದಳ್ಳುರಿ ಬಗ್ಗೆ ಪ್ರಧಾನಿ ಬಾಯಿ ಬಿಡುತ್ತಿಲ್ಲಘಿ. ನೊಂದ ರಾಜ್ಯದ ಜನರ ಪರವಾಗಿ ಮಾತನಾಡಿಲ್ಲಘಿ. ಒಮ್ಮೆಯೂ ಅಲ್ಲಿಗೆ ಭೇಟಿ ನೀಡದೇ ನಿರ್ಲಕ್ಷ್ಯ ಮಾಡಿದ್ದಾರೆ. ಅವರ ಪಾಲಿಗೆ ಮಣಿಪುರ ಭಾರತದ ಭಾಗವೇ ಆಗಿ ಉಳಿದಿಲ್ಲಘಿ,’’ ಎಂದು ಕಟುವಾಗಿ ಟೀಕಿಸಿದರು.
ನನ್ನನ್ನು ಬದಲಿಸಿದ ‘ಐಕ್ಯತಾ ಯಾತ್ರೆ’
‘‘ಭಾರತ ಐಕ್ಯತಾ ಯಾತ್ರೆ ಇನ್ನೂ ಮುಗಿದಿಲ್ಲ. ಅದು ಮುಂದುವರಿಯಲಿದೆ. 10 ವರ್ಷಗಳು ನಾನು ಏಕೆ ನಿಂದನೆಗೆ ಒಳಗಾದೆ ಎಂಬುದನ್ನು ಯಾತ್ರೆಯ ಸಂದರ್ಭದಲ್ಲಿ ಅರ್ಥ ಮಾಡಿಕೊಂಡೆ,’’ ಎಂದು ರಾಹುಲ್ ಗಾಂಧಿ ಸಂಸತ್‌ಗೆ ವಿವರಿಸಿದರು.
‘‘ದೇಶದ ಒಂದು ತುದಿಯಿಂದ ಇನ್ನೊಂದು ತುದಿಗೆ ಪಾದಯಾತ್ರೆ ಮಾಡಿದ್ದೇನೆ. ದಕ್ಷಿಣದ ಕರಾವಳಿಯಿಂದ ಕಾಶ್ಮೀರದ ಪರ್ವತಗಳವರೆಗೆ ನಡೆದಿದ್ದೇನೆ. ಯಾತ್ರೆ ಇನ್ನೂ ಮುಗಿದಿಲ್ಲ. ಪಶ್ಚಿಮದ ಕರಾವಳಿಯಿಂದ ಪೂರ್ವದ ಈಶಾನ್ಯ ರಾಜ್ಯಗಳವರೆಗೆ ಮುಂದುವರಿಯಲಿದೆ ಎಂದು ರಾಹುಲ್ ಗಾಂಧಿ ಐಕ್ಯತಾ ಯಾತ್ರೆ 2.0 ಶೀಘ್ರವೇ ಆರಂಭವಾಗಲಿದೆ ಎಂದು ಸುಳಿವು ನೀಡಿದರು.
ನಾಚಿಕೆಗೇಡಿನ ಪರಮಾವಧಿ
‘‘ಜನಾಂಗೀಯ ಸಂಘರ್ಷದಿಂದ ಹಿಂಸಾಚಾರಕ್ಕೆ ತುತ್ತಾಗಿರುವ ಮಣಿಪುರ ವಿಷಯದಲ್ಲಿ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ನಡೆ (ಐಎನ್‌ಡಿಐಎ ಮೈತ್ರಿಕೂಟ) ನಾಚಿಕೆಗೇಡಿನ ಪರಮಾವಧಿ’’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿಲುವಳಿ ಚರ್ಚೆ ಮೇಲೆ ಬುಧವಾರ ಮಾತನಾಡಿದ ಅಮಿತ್ ಶಾ, ‘‘ದೇಶವನ್ನು 50 ವರ್ಷಗಳು ಆಳ್ವಿಕೆ ಮಾಡಿದ ಕಾಂಗ್ರೆಸ್, 10 ವರ್ಷಗಳು ಆಳಿದ ಯುಪಿಎ ಸರಕಾರ ಮಣಿಪುರ ಆಗಲಿ ಅಥವಾ ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಯಾವುದೇ ನಿರ್ದಿಷ್ಟ ಕಾರ್ಯಕ್ರಮ ಅಥವಾ ಯೋಜನೆ ರೂಪಿಸಲಿಲ್ಲಘಿ. ಆ ರಾಜ್ಯಗಳ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿಕೊಂಡು ಬಂದಿದೆ. ಈಶಾನ್ಯ ರಾಜ್ಯಗಳ ನಡುವೆ ಆಂತರಿಕ ಸಂಘರ್ಷ ಸೃಷ್ಟಿ ಮಾಡಿದ್ದೇ ಕಾಂಗ್ರೆಸ್ ಸಾಧನೆ,’’ ಎಂದು ಆರೋಪಿಸಿದರು.
ಹಿಂಸಾಚಾರ ಬಿಟ್ಟು ಶಾಂತಿ ಸ್ಥಾಪನೆಗೆ ಆದ್ಯತೆ ನೀಡಿ ಎಂದು ಕುಕಿ ಹಾಗೂ ಮೈತೇಯಿ ಸಮುದಾಯಕ್ಕೆ ಕೈಮುಗಿದು ಪ್ರಾರ್ಥನೆ ಮಾಡುವೆ ಎಂದು ಹೇಳಿದ ಅಮಿತ್ ಶಾ, ‘‘ಮಣಿಪುರ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಬಿಡಿ, ಶೀಘ್ರವೇ ಶಾಂತಿಸ್ಥಾಪನೆ ಮಾಡುವ ವಾಗ್ದಾನ ಮಾಡುವೆ,’’ ಎಂದು ಹೇಳಿದರು.
ರಾಹುಲ್ ಡ್ರಾಮಾ
‘‘ಹಿಂಸಾಚಾರ ಪೀಡಿತ ಮಣಿಪುರ ವಿಚಾರದಲ್ಲಿ ರಾಹುಲ್ ಗಾಂಧಿ ದೊಡ್ಡ ನಾಟಕ ಮಾಡಿದರು,’’ ಎಂದು ಆರೋಪಿಸಿದ ಅಮಿತ್ ಶಾ, ‘‘ಚುರಾಚಾಂದ್‌ಪುರಕ್ಕೆ ರಸ್ತೆ ಮೂಲಕ ಹೋಗಲು ಹೊರಟಿದ್ದರು. ಭದ್ರತೆ ದೃಷ್ಟಿಯಿಂದ ಹೆಲಿಕಾಪ್ಟರ್‌ನಲ್ಲಿ ಪ್ರಯಾಣ ಮಾಡುವಂತೆ ಸೂಚನೆ ನೀಡಲಾಯಿತು. ಇದನ್ನೇ ದೊಡ್ಡದು ಮಾಡಿಕೊಂಡು ಹಾದಿ ಬೀದಿಯಲ್ಲಿ ರಂಪಾಟ ಮಾಡಿದರು. ಸರಕಾರ ಬಗ್ಗದೇ ಇದ್ದಾಗ ಮರುದಿನ ಕಾಪ್ಟರ್‌ನಲ್ಲಿ ಪ್ರಯಾಣ ಮಾಡಿದರು,’’ ಎಂದು ವಾಗ್ದಾಳಿ ನಡೆಸಿದರು.
ಮೋದಿ ಬದಲಾವಣೆ ಹರಿಕಾರ
‘‘ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಈಶಾನ್ಯ ರಾಜ್ಯಗಳ ಚಿತ್ರಣವೇ ಬದಲಾಗಿದೆ. ಭಾರತದಿಂದ ದೂರವೇ ಆಗಿದ್ದ ಈಶಾನ್ಯ ರಾಜ್ಯಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಯೋಜನೆ ರೂಪಿಸುವ ಮೂಲಕ ದೇಶದೊಂದಿಗೆ ಬೆಸೆದರು. ರಸ್ತೆಘಿ, ವಿಮಾನ, ರೈಲ್ವೆ ಯೋಜನೆ ಮೂಲಕ ಭಾರತದ ಜತೆ ಬೆಸುಗೆ ಹಾಕಿದರು,’’ ಎಂದು ಅಮಿತ್ ಶಾ ಹೇಳಿದರು.
‘‘ಕಳೆದ 9 ವರ್ಷದ ಬಿಜೆಪಿ ಆಡಳಿತದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಶೇ.68ರಷ್ಟು ಹಿಂಸಾಚಾರ ಕಡಿಮೆಯಾಗಿದೆ. ಪ್ರಧಾನಿ ಮೋದಿ 50 ಬಾರಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಕ್ಕೆ ವೇಗ ನೀಡಿದ್ದಾರೆ. ಹಿಂದೆ ಇದ್ದ ಪ್ರಧಾನಿ ಮನಮೋಹನ್ ಸಿಂಗ್ ಎಷ್ಟು ಬಾರಿ ಬೇಟಿ ನೀಡಿದ್ದರು ಹೇಳುವಿರಾ,’’ ಎಂದು ಕಾಂಗ್ರೆಸ್ ನಾಯಕರನ್ನು ಅವರು ಪ್ರಶ್ನಿಸಿದರು.
ಪಂಡಿತರ ರಕ್ತದ ಕಲೆ ಅಳಿದಿಲ್ಲ : ಸ್ಮೃತಿ ಎದಿರೇಟು
ಮಣಿಪುರದಿಂದ ಭಾರತವನ್ನು ಇಬ್ಭಾಗ ಮಾಡಲಾಗಿದೆ ಎಂದ ರಾಹುಲ್ ಗಾಂಧಿ ವಿರುದ್ಧ ಕಿಡಿ ಕಾರಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘’ಮಣಿಪುರ ಇಬ್ಭಾಗವಾಗಿಲ್ಲ. ಅದು ಎಂದಿಗೂ ಈ ದೇಶದ ಭಾಗವಾಗಿರಲಿದೆ. ನಿಮ್ಮ ಮೈತ್ರಿಕೂಟದ ಸದಸ್ಯರೊಬ್ಬರು ತಮಿಳುನಾಡು ಭಾರತದ ರಾಜ್ಯವಲ್ಲ ಎಂದು ಹೇಳಿದ್ದಾರೆ. ಧೈರ್ಯವಿದ್ದರೆ ಅವರ ಮಾತಿಗೆ ಪ್ರತಿಕ್ರಿಯೆ ನೀಡಿ. ಕಾಂಗ್ರೆಸ್ ನಾಯಕರೊಬ್ಬರು ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡಬೇಕು ಎಂದಿದ್ದಾರೆ. ಕಾಂಗ್ರೆಸಿಗರಿಗೆ ದೇಶದ ಏಕತೆ ಬಗ್ಗೆ ಕಾಳಜಿ ಇದ್ದರೆ ತಮ್ಮ ನಾಯಕನ ಮೇಲೆ ಕ್ರಮ ತೆಗೆದುಕೊಳ್ಳುತ್ತಾರಾ?’’ಎಂದು ಪ್ರಶ್ನಿಸಿದರು.
‘‘ರಾಹುಲ್ ಗಾಂಧಿ ಐಕ್ಯತಾ ಯಾತ್ರೆ ಕಾಶ್ಮೀರದವರೆಗೂ ನಡೆದಿದೆ. ಇದೇ ಕಾಂಗ್ರೆಸಿಗರ ಆಡಳಿತದಲ್ಲಿ ಕಣಿವೆ ರಾಜ್ಯ ರಕ್ತದಿಂದ ತೊಯ್ದಿದ್ದನ್ನು ಜನತೆ ಕಂಡಿದ್ದಾರೆ. ಪಂಡಿತರ ರಕ್ತದ ಕಲೆಗಳು ಇನ್ನೂ ಮಾಸಿಲ್ಲಘಿ. ಇಂದು ಕಣಿವೆ ರಾಜ್ಯ ಬದಲಾಗಿದ್ದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಾರಣ. 370 ನೇ ವಿಧಿ ವಾಪಸ್ ಪಡೆದ ಬಳಿಕ ಇದು ಸಾಧ್ಯವಾಗಿದೆ’’ ಎಂದು ಸ್ಮೃತಿ ಇರಾನಿ ಆರೋಪಿಸಿದರು. ತುರ್ತು ಪರಿಸ್ಥಿತಿ, 1984ರ ಸಿಖ್ ದಂಗೆ, ರಾಜಸ್ಥಾನ, ಬಂಗಾಳ, ಛತ್ತೀಸ್‌ಗಢ ಮೊದಲಾದ ರಾಜ್ಯಗಳ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.