ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-೧೭ರ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೇರಿರುವ ಕೆ.ಎಲ್.ರಾಹುಲ್ ಕೆಲವು ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಚೊಚ್ಚಲ ಐಸಿಸಿ ಟ್ರೋಫಿ ಗೆದ್ದ ಖುಷಿಯಲ್ಲಿರುವ ರಾಹುಲ್‌ರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬರೋಬ್ಬರಿ ೧೪ ಕೋಟಿ ರೂ. ನೀಡಿ ಖರೀದಿಸಿದೆ. ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಕೆಲ ಪಂದ್ಯಗಳಿಂದ ಕನ್ನಡಿಗ ರಾಹುಲ್ ಹೊರಗುಳಿಯಲಿದ್ದು ಏಪ್ರಿಲ್ ತಿಂಗಳ ಮಧ್ಯ ಭಾಗದಲ್ಲಿ ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆ ಎಲ್ ರಾಹುಲ್ ಹಾಗೂ ಪತ್ನಿ ಆಥಿಯಾ ಶೆಟ್ಟಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ರಾಹುಲ್ ಪತ್ನಿಯ ಜತೆಗೆ ಕಾಲ ಕಳೆಯಲು ನಿರ್ಧರಿಸಿದ್ದಾರೆ. ಇದರಿಂದಾಗಿಯೇ ಮೊದಲ ಮೂರ್ನಾಲ್ಕು ಪಂದ್ಯಗಳನ್ನು ರಾಹುಲ್ ತಪ್ಪಿಸಿಕೊಳ್ಳಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ರಾಹುಲ್‌ಗೆ ನಾಯಕತ್ವ ನೀಡಲು ಆಸಕ್ತಿ ತೋರಿಸಿತ್ತು. ಆದರೆ ಅದನ್ನು ಕನ್ನಡಿಗ ತಿರಸ್ಕರಿಸಿದ್ದಾರೆ. ಇದರಿಂದಾಗಿ ಅಕ್ಷರ ಪಟೇಲ್ ಅಥವಾ ಫಾಫ್ ಡುಪ್ಲೆಸಿಸ್ ತಂಡ ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಟ್ರಿಸ್ಟನ್ ಸ್ಟಬ್ಸ್, ಅಭಿಷೇಕ್ ಪೊರೆಲ್, ಮಿಚೆಲ್ ಸ್ಟಾರ್ಕ್, ಕೆಎಲ್ ರಾಹುಲ್, ಹ್ಯಾರಿ ಬ್ರೂಕ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಟಿ.ನಟರಾಜನ್, ಕರುಣ್ ನಾಯರ್, ಸಮೀರ್ ರಿಝ್ವಿ, ಅಶುತೋಷ್ ಶರ್ಮಾ, ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಮುಖೇಶ್ ಕುಮಾರ್, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ದುಷ್ಮಂತ ಚಮೀರಾ, ಡೊನೊವನ್ ಫೆರೇರಾ, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ.