ಗುವಾಹಟಿ: ಶ್ರೀರಾಮ ಮಂದಿರ ಉದ್ಘಾಟನೆ ಮತ್ತು ರಾಮ ಮಂದಿರದ ಗರ್ಭ ಗೃಹದಲ್ಲಿ ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ನಡೆಯಲಿರುವ ಜನವರಿ 22 ರಂದು ದೇಶಾದ್ಯಂತ ಎಲ್ಲ ಜನರೂ ವಿಶೇಷ ಪ್ರಾರ್ಥನೆ ಸಲ್ಲಿಸಬೇಕೆಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮಾ ಕರೆ ನೀಡಿದರು.
ಮುಸ್ಲಿಮರು ಹಾಗೂ ಕ್ರೈಸ್ತ ಸಮುದಾಯಕ್ಕೆ ಸೇರಿದವರೂ ಕೂಡಾ ಸೋಮವಾರ ವಿಶೇಷ ಪ್ರಾರ್ಥನೆಯನ್ನು ಆಯೋಜನೆ ಮಾಡಿ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮಾ ಮನವಿ ಮಾಡಿದ್ದು, ದೇಶಾದ್ಯಂತ ಯಾವುದೇ ಜಾತಿ, ಧರ್ಮ, ಸಮುದಾಯ ಹಾಗೂ ಪಂಗಡಗಳ ಭೇದ ಇಲ್ಲದೆ ಎಲ್ಲರೂ ವಿಶೇಷ ಪ್ರಾರ್ಥನೆ ಮಾಡಬೇಕಿದೆ. ನಾವೆಲ್ಲರೂ ಶಾಂತಿಯಿಂದ ಒಗ್ಗಟ್ಟಿನಿಂದ ಬಾಳಬೇಕಿದೆ ಎಂದರು.
ಇದು ಕೇವಲ ಹಿಂದೂಗಳ ವಿಜಯೋತ್ಸವ ಮಾತ್ರವಲ್ಲ, ಭಾರತೀಯ ಸಂಸ್ಕೃತಿಯ ವಿಜಯೋತ್ಸವ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಸರ್ಮಾ ಬಣ್ಣಿಸಿದ್ದು, ವಿದೇಶಿ ದಾಳಿಕೋರರು ಭಾರತದ ಧಾರ್ಮಿಕ ಪೂಜಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ರಾಮ ಮಂದಿರದ ಮೇಲೆ ಬಾಬರ್ ದಾಳಿ ನಡೆಸಿದ್ದ. ಆತ ಕೇಳವ ಹಿಂದೂಗಳ ಮೇಲೆ ದಾಳಿ ನಡೆಸಿರಲಿಲ್ಲ.
ಬ್ರಿಟಿಷರು ಭಾರತವನ್ನು ಕಾಲೋನಿ ಮಾಡಿಕೊಂಡಿದ್ದು, ಬ್ರಿಟಿಷರಿಗೂ ಬಾಬರನಿಗೂ ಯಾವುದೇ ವ್ಯತ್ಯಾಸವಿಲ್ಲ. ಏಕೆಂದರೆ ಬಾಬರ್ ಕೂಡಾ ವಿದೇಶಿ ಶಕ್ತಿ ಎಂದು ಅಸ್ಸಾಂ ಭಾಷೆಯಲ್ಲಿ ಅಲ್ಲಿನ ಮಾಧ್ಯಮಗಳಿಗೆ ವಿವರಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.