ನಿಮ್ಮ ಸುದ್ದಿ ಬಾಗಲಕೋಟೆ
ಪ್ರಸಕ್ತ ಸಾಲಿನ ಹಂಗಾಮಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‍ಗೆ ಬಿಳಿ ಜೋಳ (ಹೈಬ್ರಿಡ್) 2620 ರೂ. ಬಿಳಿಜೋಳ (ಮಾಲ್ದಂಡಿ) 2640 ರೂ.ಗಳಂತೆ ಖರೀದಿಸಲು ಜಿಲ್ಲೆಯಲ್ಲಿ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಟಾಸ್ಕಪೋರ್ಸ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರಿಂದ ಪ್ರತಿ ಎಕರೆಗೆ 15 ಕ್ವಿಂಟಾಲ್‍ನಂತೆ ಗರಿಷ್ಟ 75 ಕ್ವಿಂಟಾಲ್ ಬಿಳಿ ಜೋಳವನ್ನು ಖರೀದಿಸಲಾಗುತ್ತಿದೆ. ಕೇಂದ್ರ ಸರಕಾರ ನಿಗದಿಪಡಿಸಿದ ಎಫ್.ಎ.ಕ್ಯೂ ಗುಣಮಟ್ಟದ ಮಾನದಂಡಗಳ ಆಧಾರ ಮೇಲೆ ಗ್ರೇಡರ್‍ಗಳು ದೃಢೀಕರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಲಾಗುತ್ತದೆ ಎಂದು ತಿಳಿಸಿದರು.
ಸರಕಾರವು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೊಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರುಟ್ಸ್) ಗುರುತಿನ ಸಂಖ್ಯೆ ಮೂಲಕ ನೋಂದಾಯಿತ ರೈತರಿಂದ ಮಾತ್ರ ಖರೀದಿಸುವಂತೆ ಆದೇಶಿಸಿದ್ದಾರೆ. ಈ ಗುರುತಿನ ಸಂಖ್ಯೆ ಹೊರತುಪಡಿಸಿ ಬೇರಾವುದೇ ದಾಖಲೆಗಳು ತರುವುದು ಅವಶ್ಯವಿರುವದಿಲ್ಲ.
ನೊಂದಣಿಗೆ ಮಾರ್ಚ 14 ಕೊನೆಯ ದಿನವಾಗಿರುತ್ತದೆ. ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮದಿಂದ ಖರೀದಿಸಲಾಗುತ್ತಿದೆ. ಜಿಲ್ಲೆಯಲ್ಲಿ 64131 ಹೆಕ್ಟೇರ್ ಪ್ರದಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಆರು ತಾಲೂಕಾ ಕೇಂದ್ರಗಳಲ್ಲಿ ಬಿಳಿಜೋಳ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ. ಬಾಗಲಕೋಟೆಯ ಎಪಿಎಂಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋದಾಮು, ಬಾದಾಮಿ ಎಪಿಎಂಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋದಾಮು, ಹುನಗುಂದ ಎಪಿಎಂಸಿ ಆವರಣದಲ್ಲಿರುವ ಕೆ.ಎಫ್.ಸಿ.ಎಸ್.ಸಿ ಗೋದಾಮು, ಮುಧೋಳನ ನಿರಾಣಿ ಸಕ್ಕರೆ ಕಾರ್ಖಾನೆ ಎದುರಿಗೆ ಇರುವ ಎಸ್.ಎಚ್.ಶಹ ಗೋದಾಮು, ಬೀಳಗಿ ಬಸ್ ನಿಲ್ದಾಣದ ಹತ್ತಿರವಿರುವ ಟಿಎಪಿಸಿಎಂಎಸ್ ಆವರಣದ ಕೆ ಏಫ್ ಸಿ ಎಸ್ಸಿ ಗೋದಾಮು ಹಾಗೂ ಜಮಖಂಡಿ ಎಪಿಎಂಸಿ ಆವರಣದ ಕೆ ಎಫ ಸಿ ಎಸ್ಸಿ ಯಲ್ಲಿ ನೊಂದಣಿ ಹಾಗೂ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಖರೀದಿ ಕೇಂದ್ರಗಳಿಗೆ ತಲಾ ಒಬ್ಬರಂತೆ ಕೃಷಿ ಇಲಾಖೆಯಿಂದ ಗ್ರೇಡರ್‍ಗಳನ್ನು ನೇಮಿಸಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಕೇಂದ್ರ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು. ರೈತರ ಫ್ರುಟ್ಸ್ ಗುರುತಿನ ಸಂಖ್ಯೆಯ ನೊಂದಾವಣೆ ಕಡ್ಡಾಯವಾಗಿದ್ದು, ಅಂತಹ ರೈತರಿಂದ ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅವಕಾಶವಿರುತ್ತದೆ. ಖರೀದಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಅಂತರ್‍ಜಾಲ ವ್ಯವಸ್ಥೆ, ಕಂಪ್ಯೂಟರ್, ಪ್ರೀಂಟರ್ ಮತ್ತು ಅದಕ್ಕೆ ಬೇಕಾಗುವ ಇನ್ನೀತರ ಅಗತ್ಯ ಉಪಕರಣಗಳು, ಲೇಖನ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.ಹೆಚ್ಚಿನ ಮಾಹಿತಿಗಾಗಿ ಆಯಾ ಎಪಿಎಂಸಿ ಕಾರ್ಯದರ್ಶಿಗಳನ್ನು ಹಾಗೂ ಜಿಲ್ಲಾ ವ್ಯವಸ್ಥಾಪಕರು ಆಹಾರ ನಾಗರಿಕ ಸರಬರಾಜ ನಿಗಮ ನಿಯಮಿತ ಬಾಗಲಕೋಟೆ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ.
ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎ.ಲಕ್ಕುಂಡಿ, ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ದ ಜಿಲ್ಲಾ ವ್ಯವಸ್ಥಾಪಕಿ ಶಿಲ್ಪಾ ಸುರಪೂರ, ಎಪಿಎಂಸಿ ಕಾರ್ಯದರ್ಶಿಗಳಾದ ಜಮಖಂಡಿಯ ಎಸ್.ಎನ್.ಪತ್ತಾರ, ಹುನಗುಂದದ ನದಾಫ್, ಬಾಗಲಕೋಟೆಯ ಉಣ್ಣಿಭಾವಿ, ಬಾದಾಮಿಯ ರಾಠೋಡ ಸೇರಿದಂತೆ ಇತರರು ಉಪಸ್ಥಿತರಿದ್ದರು.