ವಿವಾದಿತ ಚುನಾವಣಾ ಬಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತೆ ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದ್ದು, ಎಲೆಕ್ಟೋರಲ್ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಗುರುವಾರದ ಮೊದಲು ಬಹಿರಂಗಪಡಿಸುವಂತೆ ಎಸ್‌ಬಿಐಗೆ ಸರ್ವೋಚ್ಚ ನ್ಯಾಯಾಲಯ ಸೋಮವಾರ ತಾಕೀತು ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಚುನಾವಣಾ ಬಾಂಡ್‌ಗಳ ‘ಕ್ರಮ ಸಂಖ್ಯೆ’ಯನ್ನೂ ಬಹಿರಂಗಪಡಿಸುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿದ್ದು, ಈ ಮೂಲಕ ಯಾವ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆ ಎಂಬ ವಿಚಾರ ತಿಳಿಯಲಿದೆ.
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಂಪನಿಗಳು ಹಾಗೂ ವ್ಯಕ್ತಿಗಳು ನೀಡಿದ ದೇಣಿಗೆಗಳ ಕುರಿತು ಎಸ್‌ಬಿಐ ಅಪೂರ್ಣ ದಾಖಲೆಗಳನ್ನು ಒದಗಿಸಿದ್ದು, ಈ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಸಿಜೆಐ ಚಂದ್ರಚೂಡ್, “ನಿಮ್ಮ ಬಳಿಯಿರುವ ಚುನಾವಣಾ ಬಾಂಡ್‌ಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ನಾವು ಬಯಸುತ್ತೇವೆ,” ಎಂದು ಹೇಳಿದರು.
ತಾನು ಯಾವುದೇ ವಿವರಗಳನ್ನು ಮುಚ್ಚಿಟ್ಟಿಲ್ಲ’ ಎಂದು ಗುರುವಾರ ಸಂಜೆ 5 ಗಂಟೆಯೊಳಗೆ ಅಫಿಡವಿಟ್ ಸಲ್ಲಿಸುವಂತೆಯೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಿಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಎಸ್‌ಬಿಐ ನೀಡಿರುವ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೂ ಕೋರ್ಟ್ ಆದೇಶಿಸಿದೆ.ಕೆಲವು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯವು ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ರದ್ದುಗೊಳಿಸಿತ್ತು. ಅಲ್ಲದೆ ಕಳೆದ ಐದು ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಎಲ್ಲಾ ವಿವರಗಳನ್ನು ಹಂಚಿಕೊಳ್ಳುವಂತೆ ಎಸ್‌ಬಿಐಗೆ ನಿರ್ದೇಶನ ನೀಡಿತ್ತು ಎಂದು ಮಾಹಿತಿ ಕಂಡು ಬಂದಿದೆ.