ದೆಹಲಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಮತಪತ್ರ ತಿರುಚಿದ ಆರೋಪದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಮತ್ತು ಮರುಎಣಿಕೆ ನಡೆಸಬೇಕು ಎಂದು ಹೇಳಿದ್ದು ಬೆಳಕಿಗೆ ಬಂದಿದೆ.
ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯ ವಿರುದ್ಧ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣಾಧಿಕಾರಿ ಸಮ್ಮಿಶ್ರ ಪಾಲುದಾರರ ಎಂಟು ಮತ ಅಸಿಂಧು ಎಂದು ಘೋಷಿಸಿದ್ದು, ಇದರ ಬೆನ್ನಲ್ಲೇ ಚುನಾವಣಾ ಅಧಿಕಾರಿ ಬ್ಯಾಲೆಟ್ ಪೇಪರ್ ತಿದ್ದಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಬಿಜೆಪಿಯ ಮನೋಜ್ ಸೋಂಕರ್ ಅವರು ತಮ್ಮ ಪ್ರತಿಸ್ಪರ್ಧಿಯ 12 ಮತಗಳ ವಿರುದ್ಧ 16 ಮತಗಳೊಂದಿಗೆ ಮೇಯರ್ ಸ್ಥಾನವನ್ನು ಅಲಂಕರಿಸಿದರು, ಆದರೆ ನಂತರ ಅವರು ರಾಜೀನಾಮೆ ನೀಡಿದರು. ಇದರ ಜತೆಗೇ ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
ನ್ಯಾಯಾಲಯದ ಆದೇಶವನ್ನು ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದು, ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸಿದ್ದಾರೆ.