ನೇಕಾರರ ಸಭೆ:ಸರಕಾರದ ಕ್ರಮ ಖಂಡನೀಯ
ನಿಮ್ಮ ಸುದ್ದಿ ಬೆಳಗಾವಿ
ಮುಖ್ಯಮಂತ್ರಿ ಸಮ್ಮುಖದಲ್ಲಿ ನೇಕಾರರ ಸಮಸ್ಯೆಗಳ ಚರ್ಚೆಗೆ ಕಾಂಗ್ರೆಸ್ ಶಾಸಕರು ಸೇರಿದಂತೆ ನೇಕಾರ ಮುಖಂಡರನ್ನು ಆಹ್ವಾನಿಸದ ಸರಕಾರದ ಕ್ರಮವನ್ನು ಕೆಎಚ್‌ಡಿಸಿ ಮಾಜಿ ಅಧ್ಯಕ್ಷ ರವೀಂದ್ರ ಕಲಬುರ್ಗಿ ಖಂಡಿಸಿದ್ದಾರೆ.
ಗುರುವಾರ ಬೆಳಗ್ಗೆ ಬೆಳಗಾವಿ ವಿಟಿಯುನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಕರೆಯಲಾದ ನೇಕಾರರ ಸಮಸ್ಯೆಗಳ ಚರ್ಚೆಯನ್ನು ಸರಕಾರ ಕಾಟಾಚಾರಕ್ಕೆ ಕರೆದಂತಾಗಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ನೇಕಾರ ಮತದಾರರಿರುವ ಮತಕ್ಷೇತ್ರದ ಬಿಜೆಪಿ ಶಾಸಕರನ್ನು ಸಭೆಗೆ ಆಹ್ವಾನಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಹಾಗೂ ಜವಳಿ ಇಲಾಖೆಯ ತಜ್ಞರನ್ನು, ಮಗ್ಗಗಳ ನಿಗಮದ ಹಾಲಿ ಮಾಜಿ, ಅಧ್ಯಕ್ಷ, ಉಪಾಧ್ಯಕ್ಷರನ್ನು, ಮಗ್ಗಗಳ ವೃತ್ತಿ ತಜ್ಞರನ್ನು ಆಹ್ವಾನಿಸದೇ ಕೇವಲ ಕಣ್ಣೊರೆಸುವ ತಂತ್ರ ರೂಪಿಸಿದೆ.
ನೇಕಾರರ ವಾಸ್ತವ ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ಸರಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ನೇಕಾರರು ಹೋರಾಟ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.