ನವದೆಹಲಿ: ಈ ವರ್ಷ ಹಾಗೂ ಮುಂದಿನ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ. 6.5ರಷ್ಟು ಇರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಅಭಿಪ್ರಾಯಪಟ್ಟಿದೆ ಎಂದು ಮಾಹಿತಿ ತಿಳಿದು ಬಂದಿದೆ.
2024ರಲ್ಲಿ ಜಾಗತಿಕ ಬೆಳವಣಿಗೆ ಶೇ. 3.1ರಷ್ಟು ಇದ್ದರೆ, 2025ರಲ್ಲಿ ಶೇ. 3.2ರಷ್ಟು ಇರಬಹುದು ಎಂದು ಹೇಳಿದ್ದು, ಐಎಂಎಫ್ ಜನವರಿ 30ರಂದು ಬಿಡುಗಡೆ ಮಾಡಿದ ವರ್ಲ್ಡ್ ಎಕನಾಮಿಕ್ ಔಟ್ಲುಕ್ನ ಪರಿಷ್ಕೃತ ವರದಿಯಲ್ಲಿ ವಿಶ್ವಾದ್ಯಂತ ಆರ್ಥಿಕ ಬೆಳವಣಿಗೆಯ ಬಗ್ಗೆ ಹೊಸ ಅಂದಾಜು ಮಾಡಿದೆ.ಈ ಹಿಂದಿನ ವರದಿಯಲ್ಲಿ ಐಎಂಎಫ್ 2024 ಮತ್ತು 2025ರಲ್ಲಿ ಭಾರತ ಶೇ. 6.3ರಷ್ಟು ಜಿಡಿಪಿ ವೃದ್ಧಿ ಕಾಣಬಹುದು ಎಂದು ಅಂದಾಜು ಮಾಡಿದ್ದು, ಬದಲಾದ ಪರಿಸ್ಥಿತಿಯಲ್ಲಿ ತನ್ನ ನಿರೀಕ್ಷೆಯನ್ನು ಹೆಚ್ಚಿಸಿದೆ.
ಹಣದುಬ್ಬರ ನಿರಂತರವಾಗಿ ಇಳಿಮುಖವಾಗುತ್ತಿದ್ದು, ಬೆಳವಣಿಗೆ ಹೆಚ್ಚುತ್ತಾ ಹೋಗುತ್ತಿದೆ. ಮೋಡಗಳು ಚದುರತೊಡಗಿವೆ. ಜಾಗತಿಕ ಆರ್ಥಿಕತೆ ಸರಾಗವಾಗಿ ಸಾಗತೊಡಗಿದೆ ಎಂದು ಐಎಂಎಫ್ನ ಚೀಫ್ ಎಕನಾಮಿಸ್ಟ್ ಒಲಿವಿಯರ್ ಗೌರಿಂಚಸ್ ಹೇಳಿದ್ದು, ಬೆಳವಣಿಗೆ ವೇಗ ಮಾತ್ರ ಇನ್ನೂ ಮಂದವಾಗಿದ್ದು, ಹೊಯ್ದಾಟಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷಿಸಬಹುದು ಎಂದೂ ಅವರು ಎಚ್ಚರಿಸಿದ್ದಾರೆ.
ಭಾರತ ಮಾತ್ರವಲ್ಲ, ವಿಶ್ವದ ಎಲ್ಲಾ ದೇಶಗಳ ಬೆಳವಣಿಗೆ ಬಗ್ಗೆಯೂ ಐಎಂಎಫ್ ನಿರೀಕ್ಷೆ ಹೆಚ್ಚಿದೆ.ಐಎಂಎಫ್ ವರದಿ ಪ್ರಕಾರ ಚೀನಾ 2024ರಲ್ಲಿ ಶೇ. 4.6ರಷ್ಟು ಬೆಳೆಯಬಹುದು ಎಂದಿದೆ. 2025ರಲ್ಲಿ ಜಿಡಿಪಿ ವೃದ್ಧಿ ಶೇ. 4.1 ಇರಬಹುದು ಎನ್ನಲಾಗಿದೆ.ಅಮೆರಿಕದ ವಿಷಯಕ್ಕೆ ಬಂದರೆ ಐಎಂಎಫ್ ನಿರೀಕ್ಷೆ ಕಡಿಮೆ ಆಗಿದೆ. ಅಂದರೆ, 2023ರಲ್ಲಿ ಶೇ. 2.5ರಷ್ಟು ಇದ್ದ ಆರ್ಥಿಕ ವೃದ್ಧಿ 2024ರಲ್ಲಿ ಶೇ. 2.1ಕ್ಕೆ ಇಳಿಯಬಹುದು. 2025ರಲ್ಲಿ ಅದು ಶೇ. 1.7ರಷ್ಟು ಇರಬಹುದು ಎಂದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಅಂದಾಜು ಮಾಡಿದೆ.