ರಾಮನಗರ : ತರಕಾರಿಗಳಿಗೆ, ಸೊಪ್ಪುಗಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗುತ್ತಿದ್ದು, ಮನೆ ಅಡುಗೆ ಅಷ್ಟೇ ಅಲ್ಲದೇ ಹೋಟೆಲ್, ಕಲ್ಯಾಣ ಮಂಟಪ, ಶುಭ ಸಮಾರಂಭ ಅಲ್ಲದೇ ದೇವಸ್ಥಾನದ ದಾಸೋಹ ಪ್ರಸಾದಗಳಿಗೂ ತರಕಾರಿ ತರಬೇಕಾದರೆ ಜೇಬಿನಲ್ಲಿ ಅಥವಾ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಒಂದೊಮ್ಮೆ ಚೆಕ್ ಮಾಡಿ ಖರೀದಿಸಬೇಕಾದ ಅನಿವಾರ‍್ಯತೆ ಸೃಷ್ಟಿಯಾಗಿದೆ.
ಈ ಎಲ್ಲ ಅವಾಂತರಗಳಿಗೆ ‘ದುಬಾರಿಯಾಗಿರುವ ತರಕಾರಿ ದರ’ಗಳೇ ಕಾರಣ. ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆ 70 ರೂ. ಗಡಿ ದಾಟಿದೆ. ತರಕಾರಿಗಳ ದರ ಕೈಗೆಟ್ಟುಕುತ್ತಿಲ್ಲ. ಹೀಗಾಗಿ ತಿಳಿ ಸಾರು ಮಾಡಲು ಸಹ ಗೃಹಿಣಿಯರು ಹಿಂದು ಮುಂದು ನೋಡುವಂತಾಗಿದೆ. ತರಕಾರಿ ತರುವ ದರದಲ್ಲಿಚಿಕನ್, ಮಟನ್‌ಗಳೇ ಬರುತ್ತಿವೆ. ಆದರೆ, ಇಂತಹ ಖಾದ್ಯಗಳಿಗೂ ಅವಶ್ಯಕವಾಗಿರುವ ಕೊತ್ತಂಬರಿ, ಬೆಳ್ಳುಳ್ಳಿ, ಶುಂಠಿ, ನಿಂಬೆಹಣ್ಣು ಸೇರಿದಂತೆ ಇತರೆ ಸಾಮಗ್ರಿಗಳು ಸಹ ಆಕಾಶದ ಎತ್ತರಕ್ಕೆ ದರ ಜಿಗಿತ ಕಂಡಿದೆ.
ಮಳೆ ಆರಂಭಗೊಂಡ ಬಳಿಕ ತರಕಾರಿ ದರ ತುಸು ಕಡಿಮೆಯಾಗಿತ್ತು. ಆದರೆ, ಈಗ ಮತ್ತೊಮ್ಮೆ ತರಕಾರಿ ದರ ಏಕಾಏಕೀ ಏರಿಕೆಗೊಂಡಿದೆ. ಬರಗಾಲದಿಂದಾಗಿ ಇಳುವರಿ ಕುಸಿತಗೊಂಡಿತ್ತು. ಮಳೆಯಿಂದಾಗಿ ಕೊಳೆಯುವ ಹಂತ ತಲುಪಿರುವ ತರಕಾರಿ, ಸೊಪ್ಪುಗಳಿಂದಾಗಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿರುವುದು ದರ ಏರಿಕೆಗೆ ಕಾರಣ ಎನ್ನುತ್ತಾರೆ ವರ್ತಕ ನಿಂಗರಾಜು.
ಕಾರ‍್ಯಕ್ರಮಗಳಲ್ಲಿಅಡುಗೆ ಮಾಡಿಸುವುದೇ ಆಯೋಜಕರಿಗೆ ದೊಡ್ಡ ತಲೆನೋವಾಗಿದೆ. ಅದರಲ್ಲೂಸಸ್ಯಹಾರಿ ಅಡುಗೆಗಳಿಗೆ ಬಳಸಬೇಕಿರುವ ತರಕಾರಿ, ಸೊಪ್ಪಿನ ದರಗಳಲ್ಲಿ ಮತ್ತೊಂದು ಶುಭ ಕಾರ‍್ಯಗಳನ್ನೇ ಮಾಡಿ ಮುಗಿಸಬಹುದಾಗಿದೆ. ಈ ಹಿಂದೆ ತೀವ್ರ ಬಿಸಿಲಿನ ತಾಪದಿಂದ ತರಕಾರಿ ದರ ಏರಿಕೆ ಕಂಡಿತ್ತು.
ಹೋಟೆಲ್ ಅಡುಗೆಗೆ ಮಾತ್ರವಲ್ಲ, ಮನೆಯೂಟಕ್ಕೂ ತರಕಾರಿಗಳಿಲ್ಲ. ಕೊತ್ತಂಬರಿ ಸೊಪ್ಪಿಲ್ಲ, ಕಾಯಿತುರಿ ಇಲ್ಲ, ಟೊಮೆಟೊ ಇಲ್ಲ, ಈರುಳ್ಳಿ ಇಲ್ಲ, ಬದನೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಹೀರೆಕಾಯಿ ಬೀಟ್‌ರೋಟ್, ಮೆಣಿಸಿನಕಾಯಿ ಹೀಗೆ ಇಲ್ಲಇಲ್ಲಗಳ ನಡುವೆ ಸಾಂಬಾರು ತಯಾರಿ ಆಗಬೇಕಿದೆ.
ತಿಳಿಸಾರೇ ಗತಿ ಎನ್ನುವಂತಾಗಿದೆ. ಹೀಗಾಗಿ ಏನು ಇಲ್ಲದೆ ಚಿತ್ರನ್ನಾ, ಮಸಾಲೆ ಸಾಂಬಾರುಗಳು ಸಿದ್ಧಗೊಳ್ಳುತ್ತಿವೆ. ಕಾರ‍್ಯಕ್ರಮಗಳಲ್ಲಿಅಡುಗೆ ಸಾಮಗ್ರಿಗಳೇ ಈರುಳ್ಳಿಗಿಂತ ಹೆಚ್ಚಿನ ಕಣ್ಣಿರು ತರಿಸುತ್ತಿವೆ ಎಂದು ಮಾಹಿತಿ ತಿಳಿದು ಬಂದಿದೆ.