ಇಟಾನಗರ: ಜಗತ್ತಿನ ಅತಿ ಉದ್ದನೆಯ ಅವಳಿ ಲೇನ್ ಸುರಂಗವನ್ನು ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು ಎಂದು ಮಾಹಿತಿ ತಿಳಿದು ಬಂದಿದೆ.
13 ಸಾವಿರ ಅಡಿ ಎತ್ತರದಲ್ಲಿ ನಿರ್ಮಾಣವಾಗಿರುವ, ಕಾರ್ಯತಂತ್ರವಾಗಿ ಬಹಳ ಮುಖ್ಯವಾಗಿರುವ ಸೇಲಾ ಸುರಂಗವು ಅರುಣಾಚಲ ಪ್ರದೇಶದ ತವಾಂಗ್‌ಗೆ ಸರ್ವ ಋತು ಸಂಪರ್ಕ ಒದಗಿಸುತ್ತಿದ್ದು, ಅಸ್ಸಾಂಗೆ ಶುಕ್ರವಾರ ತಲುಪಿದ ಪ್ರಧಾನಿ ಮೋದಿ, ಶನಿವಾರ ಮುಂಜಾನೆ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದು, ಉದ್ಯಾನದ ಸೆಂಟ್ರಲ್ ಕೊಹೊರಾ ವಲಯದಲ್ಲಿ ಆನೆ ಸಫಾರಿ ನಡೆಸಿದ ಅವರು, ಬಳಿಕ ಅರಣ್ಯ ಅಧಿಕಾರಿಗಳ ಜತೆ ಅದೇ ವಲಯದಲ್ಲಿ ಜೀಪ್ ಸಫಾರಿ ಕೈಗೊಂಡರು.
ನಂತರ, ಅರುಣಾಚಲ ಪ್ರದೇಶದ ಇಟಾನಗರದಲ್ಲಿ ‘ವಿಕಸಿತ ಭಾರತ ವಿಕಸಿತ ಈಶಾನ್ಯ’ ಕಾರ್ಯಕ್ರಮದಡಿ ವಿಶ್ವದ ಅತಿ ಉದ್ದನೆಯ ದ್ವಿ- ಪಥ ಸುರಂಗವಾದ ಸೇಲಾ ಸುರಂಗವನ್ನು ಲೋಕಾರ್ಪಣೆ ಮಾಡಿದ್ದು, ಎಂಜಿನಿಯರಿಂಗ್ ಚಾಣಾಕ್ಷತೆಗೆ ಪ್ರತೀಕವಾಗಿರುವ ಸೇಲಾ ಸುರಂಗವು, ಅರುಣಾಚಲ ಪ್ರದೇಶದಲ್ಲಿ ಸೇಲಾ ಪಾಸ್ ಮೂಲಕ ತವಾಂಗ್‌ಗೆ, ಬಲಿಪರ- ಚಾರಿದೌರ್- ತವಾಂಗ್ ರಸ್ತೆ ಮೂಲಕ ಎಲ್ಲಾ ಋತುಮಾನಗಳಲ್ಲಿಯೂ ಸಂಪರ್ಕ ಒದಗಿಸುವಂತಿದೆ.
ಸುಮಾರು 825 ಕೋಟಿ ರೂ ವೆಚ್ಚದ ಈ ಸುರಂಗವು ಭಾರತಕ್ಕೆ ವ್ಯೂಹಾತ್ಮಕವಾಗಿ ಬಹಳ ಮುಖ್ಯವಾಗಿದ್ದು, ಈ ಸುರಂಗ ಮಾರ್ಗಕ್ಕೆ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ನೆರವೇರಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.