ಅಧ್ಯಕ್ಷ ಸ್ಥಾನಕ್ಕೆ ಮತ್ತೊಬ್ಬರ ಹೆಸರು ಸೂಚಿಸಿದ ಚರಂತಿಮಠ
ನಿಮ್ಮ ಸುದ್ದಿ ಬಾಗಲಕೋಟೆ
ಇತ್ತೀಚೆಗೆ ರಚನೆಯಾದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.
ಆದರೆ ಈ ವಿಷಯ ತಿಳಿದ ಡಾ.ವೀರಣ್ಣ ಚರಂತಿಮಠ ತಮ್ಮ ಹೆಸರಿನ ಬದಲಾಗಿ ಮತ್ತೊಬ್ಬರ ಹೆಸರು ಸೂಚಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
ಡಾ.ವೀರಣ್ಣ ಚರಂತಿಮಠ ಅವರು ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಜತೆಗೆ ಸಮುದಾಯದ ಸ್ವಾಮೀಜಿಗಳೊಂದಿಗೆ ಅವಿನಾಭಾವ ಹೊಂದಿದ್ದ ಹಿನ್ನಲೆಯಲ್ಲಿ ನೂತನ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ಎಂದು ಬಂದ ವಿನಂತಿಯನ್ನು ನಯವಾಗಿಯೇ ತಿರಸ್ಕರಿಸಿದ್ದು ಆ ಹುದ್ದೆಯ್ಲಿ ಬೆಂಗಳೂರಿನ ಬಿ.ಎಸ್.ಪರಮಶಿವಯ್ಯ ಅವರಿಗೆ ವಹಿಸುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ವಿನಂತಿಸಿದ್ದಾರೆನ್ನಲಾಗಿದೆ.
ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಕಾರ್ಯಾಧ್ಯಕ್ಷರಾಗಿರುವ ಪರಮಶಿವಯ್ಯ ಅವರು ಬೆಂಗಳೂರಿನಲ್ಲಿ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರೇ ಪ್ರಾಧಿಕಾರಕ್ಕೆ ಸೂಕ್ತ. ಸಮಾಜ ಸಂಘಟನೆಯಲ್ಲೂ ಅವರನ್ನು ಮತ್ತಷ್ಟು ಉಪಯೋಗಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.