ನಿಮ್ಮ ಸುದ್ದಿ ಬಾಗಲಕೋಟೆ
ಸರಕಾರದ ಮಹತ್ವಾಕಾಂಕ್ಷಿ ಚಿಂತನೆಯಾದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಡಿ ಅಧಿಕಾರಿಗಳ ವಾಸ್ತವ್ಯ ಮುಂದಾಲೋಚನೆಯಿಂದ ಕೂಡಿರಬೇಕು ಎಂದು ವಡಗೇರಿ ಗ್ರಾಪಂ ಅಧ್ಯಕ್ಷೆ ಹನಮವ್ವ ಹಿರೇಕುರುಬರ ತಿಳಿಸಿದ್ದಾರೆ.
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರತಿ ತಿಂಗಳ ಮೂರನೇ ಶನಿವಾರ ನಡೆಯುತ್ತಿದ್ದು ಜನರ ಸಮಸ್ಯೆಗೆ ಸ್ಪಂದನೆ ದೊರೆತಿಯುತ್ತಿದೆ. ಅದನ್ನು ಗ್ರಾಪಂ ಆಡಳಿತ ಸ್ವಾಗತಿಸುತ್ತದೆ. ಇಳಕಲ್ ತಾಲೂಕಿನಿಂದ ಮಾ.೨೦ರಂದು ವಡಗೇರಿ ಗ್ರಾಪಂ ವ್ಯಾಪ್ತಿಯ ಧಮ್ಮೂರ ಗ್ರಾಮವನ್ನು ಆಯ್ಕೆ ಮಾಡಿಕೊಂಡಿರುವುದು ಸಂತಸದ ಸಂಗತಿ ಆಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಇಂತಹ ಮಹತ್ವಾಕಾಂಕ್ಷಿ ಚಿಂತನೆ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ನಡೆಯುತ್ತಿರುವುದರ ಕುರಿತು ಸರಿಯಾದ ಮಾಹಿತಿಯೇ ಇಲ್ಲದಂತಾಗಿದೆ. ವಾಸ್ತವ್ಯಕ್ಕೆ ಆಯ್ಕೆ ಮಾಡುವಾಗ ಅಲ್ಲಿನ ಆಡಳಿತ ಸೇರಿದಂತೆ ಹಲವರ ಅಭಿಪ್ರಾಯ ಪಡೆದು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡರೆ ಜನರ ಹಾಗೂ ಗ್ರಾಮದ ಸಮಸ್ಯೆಗೆ ಸೂಕ್ತ ವೇದಿಕೆ ಆಗುತ್ತದೆ.
ಈ ಹಿಂದೆ ಹುನಗುಂದ ತಾಲೂಕಿನ ಬೇವಿನಮಟ್ಟಿಯಲ್ಲಿ ಗ್ರಾಮವಾಸ್ತವ್ಯ ಕೈಗೊಂಡಾಗ ಜನರಿಲ್ಲದೆ ಅಧಿಕಾರಿಗಳು ಕಾಯುವಂತಾಗಿದ್ದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದು ತಿಳಿಸಿದ ಅವರು ಅಕಾರಿಗಳು ವಾಸ್ತವ್ಯಕ್ಕೆ ಗ್ರಾಮ ಆಯ್ಕೆ ಮಾಡಿದಾಗ ಸ್ಥಳಿಯ ಅಧಿಕಾರಿಗಳಾದರೂ ಮುಂಚಿತವಾಗಿ ಆಡಳಿತದ ಗಮನಕ್ಕೆ ತರಬೇಕು ಎಂದು ಅವರು ಆಗ್ರಹಿಸಿದ್ದಾರೆ.