ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿಕೆ
ನಿಮ್ಮ ಸುದ್ದಿ ಬೆಂಗಳೂರು
ಕೇಂದ್ರದ ಕೃಷಿ ಸುಧಾರಣಾ ಕಾಯಿದೆಗಳ ಕುರಿತು ಜನಜಾಗೃತಿ ಮೂಡಿಸಲು ಇನ್ನು 10 ದಿನಗಳ ಒಳಗಾಗಿ ರಾಜ್ಯದಲ್ಲಿ ಜನಜಾಗೃತಿ ವರ್ಚುವಲ್ ಸಭೆಗಳನ್ನು ನಡೆಸಲಾಗುವುದು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ತಿಳಿಸಿದರು.
ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠ, ಕರ್ನಾಟಕದ ವತಿಯಿಂದ ಭಾನುವಾರ ಮಲ್ಲೇಶ್ವರದ “ಜಗನ್ನಾಥ ¨ಭವನ”ದಲ್ಲಿ ಏರ್ಪಡಿಸಿದ “ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ಕಾರ್ಯಾಗಾರ”ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಕೃಷಿ ಸುಧಾರಣಾ ಮಸೂದೆಗಳ ಕುರಿತು ಪಟ್ಟಭದ್ರ ಹಿತಾಸಕ್ತಿಗಳು ತಪ್ಪು ಮಾಹಿತಿ ನೀಡುತ್ತಿವೆ. ಮಸಿ ಬಳಿಯುವ ಕೆಲಸ ನಡೆದಿದೆ. ಇದನ್ನು ಹೋಗಲಾಡಿಸುವ ಅಗತ್ಯವಿದೆ ಎಂದರು.
ಹೊಸ ಕಾಯಿದೆಗಳಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಹೊಸತನ ಬರಲಿದೆ. ಬಹುಹಂತದ ಮಾರಾಟ ವ್ಯವಸ್ಥೆಯ ಬದಲಾಗಿ ವ್ಯಾಪಾರಿ- ರೈತರ ನಡುವೆ ನೇರವಾಗಿ ವ್ಯವಹಾರ ನಡೆದು ರೈತರ ಆದಾಯ ಹೆಚ್ಚಲಿದೆ ಎಂದು ತಿಳಿಸಿದರು.
ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಮತ್ತು ದೂರದೃಷ್ಟಿಯ ಚಿಂತನೆಗಳಿಂದ ದೇಶವು ಭ್ರಷ್ಟಾಚಾರ, ಹಗರಣ ಮುಕ್ತವಾಗಿ ಮುನ್ನಡೆದಿದೆ. ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪ ಅವರ ನೇತೃತ್ವದ ಸರಕಾರವು ರಾಜ್ಯವನ್ನು ಸರ್ವಾಂಗೀಣ ಪ್ರಗತಿಯತ್ತ ಒಯ್ಯುತ್ತಿದೆ ಎಂದು ವಿವರಿಸಿದರು.
ರಾಜ್ಯ ಸರಕಾರದ ಯೋಜನೆಗಳ ವಿವರವನ್ನು ಇನ್ನಷ್ಟು ಸಮಗ್ರ ಮತ್ತು ಪರಿಣಾಮಕಾರಿಯಾಗಿ ಮುಂದೆ ವೆಬ್‍ಸೈಟ್‍ಗಳಲ್ಲಿ ಒದಗಿಸಲಾಗುವುದು ಎಂದ ಅವರು, 2023ರಲ್ಲಿ ಪಕ್ಷವು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಉತ್ತಮ ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದು ಮನವಿ ಮಾಡಿದರು.
ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ನಾವು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಬೇಕು. ಇದನ್ನು ನಮ್ಮ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು 2014 ಹಾಗೂ 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಶ್ರೀ ನಿರ್ಮಲ್‍ಕುಮಾರ್ ಸುರಾಣ, ರಾಜ್ಯ ಸಂಚಾಲಕರಾದ ಶ್ರೀ ವಿನೋದ್ ಕೃಷ್ಣಮೂರ್ತಿ ಹಾಗೂ ರಾಜ್ಯದ ಸಹ ಸಂಚಾಲಕರಾದ ಶ್ರೀ ಪ್ರಶಾಂತ್ ಜಾಧವ್ ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.