ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಇಳಕಲ್ ತಾಲೂಕಿನ ಚಿಲ್ಲಾಪೂರ ಗ್ರಾಮದಲ್ಲಿ ಕುಡಿವ ನೀರಿನ ಯೋಜನೆಯಲ್ಲಿ ಗೋಲ್‌ಮಾಲ್ ನಡೆದಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಗ್ರಾಪಂ ಅಧ್ಯಕ್ಷೆ ಸುಮಿತ್ರಾ ಜಂಬಲದಿನ್ನಿ ಆಗ್ರಹಿಸಿದ್ದಾರೆ.
ಚಿಕನಾಳ ಗ್ರಾಪಂ ವ್ಯಾಪ್ತಿಯ ಚಿಲ್ಲಾಪೂರದಲ್ಲಿ ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯಿಂದ ಕುಡಿವ ನೀರು ಪೂರೈಕೆಯ ಕಾಮಗಾರಿಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸಿಲ್ಲ. ಇಎಲ್‌ಎಸ್‌ಆರ್ ಟ್ಯಾಂಕ್ ದುರಸ್ಥಿಯಿದ್ದು ಅದು ದುರಸ್ಥಿಯಾಗದೆ ಅನುದಾನ ಪಾವಸ್ ಹೋಗಿದೆ ಎಂದು ದೂರಿದ್ದಾರೆ.
ಮತ್ತೊಂದೆಡೆ ಪೈಪ್‌ಲೈನ್ ಕಾಮಗಾರಿಯಲ್ಲಿ ಟೆಂಡರ್‌ನಲ್ಲಿ ನಮೂದಿಸಿದಂತೆ ಜೆಐ ಪೈಪ್‌ಲೈನ್ ೪೨೫ ಮೀಟರ್ ಇದ್ದು ಅದು ಅರ್ಧಕ್ಕೆ ಮೊಟಕುಗೊಂಡಿದೆ. ಹಲವು ಬಾರಿ ಹುನಗುಂದ ಎಇಇ ಕಚೇರಿ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೈಗೊಂಡ ಕಾಮಗಾರಿಯೂ ಕಳಪೆ ಆಗಿದ್ದು ಚಿಲ್ಲಾಪೂರ ಗ್ರಾಮಕ್ಕೆ ಕುಡಿವ ನೀರಿನ ಪೂರೈಕೆಯಲ್ಲಿ ತೊಂದರೆ ಇರುವುದರಿಂದ ಸರಿಯಾಗಿ ತನಿಖೆ ಮಾಡಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒಗೆ ಬರೆದ ಪತ್ರದಲ್ಲಿ ವಿನಂತಿಸಿದ್ದಾರೆ.