ನಿಮ್ಮ ಸುದ್ದಿ ಕೊಪ್ಪಳ
ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿರುದ್ಯೋಗಿ ಆಗಲಿದ್ದಾರೆ. ಅವರಿಗೆ ಚುನಾವಣೆ ನಿಲ್ಲಲು ಕ್ಷೇತ್ರ ಸಿಗುತ್ತಿಲ್ಲ. ಅವರು ಎಲ್ಲೇ ಸ್ಪರ್ಧಿಸಿದರೂ ನಾವು ಸೋಲಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಹೇಳಿದರು.
ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ರಾಜಕೀಯ ಬಿಟ್ಟು ಜೋತಿಷ್ಯ ಹೇಳೋದು ಒಳ್ಳೆಯದು. ಈ ಹಿಂದೆ ಅಪ್ಪನಾಣೆ ನರೇಂದ್ರ ಮೋದಿ ಪ್ರಧಾನಿ ಆಗಲ್ಲ ಅಂದ್ರು. ಮೋದಿ ಎರಡು ಬಾರಿ ಪಿಎಂ ಆದರು. ಯಡಿಯೂರಪ್ಪ ಸಿಎಂ ಆಗಲ್ಲ ಅಂದ್ರು. ಅವರೂ ಸಿಎಂ ಆದರು. ಈಗಲೂ ಅವರು ಹೇಳೋದೆಲ್ಲ ನಡೆಯುವುದಿಲ್ಲ. ಅವರಿಗೆ ಸ್ವಂತ ಕ್ಷೇತ್ರ ಇಲ್ಲ. ಅಂದ ಮೇಲೆ ಅವರ ಪಕ್ಷ ಅಧಿಕಾರಕ್ಕೆ ಬರುವುದಾದರೂ ಹೇಗೆ? ಕೋಲಾರದಲ್ಲಿ ಸ್ಪರ್ಧಿಸಿದರೆ ಕಾಂಗ್ರೆಸ್ ನವರೇ ಅವರನ್ನು ಸೋಲಿಸುತ್ತಾರೆ. ಯಾವುದೇ ಕ್ಷೇತ್ರದಲ್ಲಿ ನಿಂತರೂ ನಾವು ಸೋಲಿಸುತ್ತೇವೆ ಎಂದರು.
ಮಾಜಿ ಸಿಎಂ ಕುಮಾರ ಸ್ವಾಮಿ ಪದೇ ಪದೆ ಯಾವುದೇ ಜಾತಿ ನಿಂದಿಸುವುದು ಸರಿಯಲ್ಲ. ಮೂರು ಪಕ್ಷಗಳು ತಮ್ಮ ಸರ್ಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಿ. ನಮ್ಮ ಸರ್ಕಾರ ತಪ್ಪು ಮಾಡಿದಲ್ಲಿ ಟೀಕಿಸಲಿ. ಅದು ಬಿಟ್ಟು ಜಾತಿ ನಿಂದನೆ ಮಾಡಬಾರದು ಎಂದರು.
ಜನಾರ್ದನ ರೆಡ್ಡಿ ಸ್ಪರ್ಧೆಯಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಯಾರು ಬೇಕಾದರೂಚುನಾವಣೆಗೆ ಸ್ಪರ್ಧಿಸಬಹುದು. ನಮ್ಮ ಪಕ್ಷದಲ್ಲಿ ಪಾರ್ಲಿಮೆಂಟ್ರಿ ಬೋರ್ಡ್ ಇದ್ದು, ಯಾರಿಗೆ ಟಿಕೆಟ್ ನೀಡಬೇಕೆಂದು ನಿರ್ಧರಿಸಲಿದೆ.
ರಾಜ್ಯ ನಾಯಕರಿಗೆ ತಾಕತ್ ಇಲ್ಲದ ಕಾರಣ ಮೋದಿ, ಷಾ ಕರೆಸುತ್ತಿದ್ದಾರೆಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿ, ರಾಹುಲ್, ಸೋನಿಯಾ, ಪ್ರಿಯಾಂಕ ಅವರು ಚುನಾವಣೆ ಪ್ರಚಾರಕ್ಕೆ ಬರುವುದಿಲ್ಲವಾ? ಇವರಿಗೆ ಧಮ್ ಇದ್ರೆ ಅವರನ್ನು ಕರೆಸಬಾರದು. ಖರ್ಗೆ ಸಹ ಈಗ ರಾಷ್ಟ್ರೀಯ ನಾಯಕ. ಅವರನ್ನು ಕರೆಸದೇ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.