ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾರು ಬುಧವಾರ ಅಪಘಾತಕ್ಕೀಡಾಗಿದ್ದು, ಅವರ ತಲೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಅವರು ಬರ್ಧಮಾನ್‌ನಿಂದ ಕೋಲ್ಕತಾಕ್ಕೆ ವಾಪಸ್ ಬರುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದ್ದು, ಪ್ರತಿಕೂಲ ಹವಾಮಾನದ ಕಾರಣದಿಂದ ಮಮತಾ ಅವರ ಹೆಲಿಕಾಪ್ಟರ್ ಬರ್ಧಮಾನ್‌ನಲ್ಲಿ ಟೇಕ್ ಆಫ್ ಆಗುವುದು ಸಾಧ್ಯವಾಗಿರಲಿಲ್ಲ. ಅವರು ಕೋಲ್ಕತಾಗೆ ಕಾರಿನಲ್ಲಿ ವಾಪಸಾಗುತ್ತಿದ್ದರು.
ಕಾರಿನ ಮುಂಭಾಗದಲ್ಲಿ ಚಾಲಕನ ಪಕ್ಕದ ಸೀಟಿನಲ್ಲಿ ಮಮತಾ ಕುಳಿತಿದ್ದರು. ಕಾರು ಹಠಾತ್ ನಿಂತಿದ್ದರಿಂದ ನಿಯಂತ್ರಣ ತಪ್ಪಿ ವಿಂಡ್ ಶೀಲ್ಡ್‌ಗೆ ತಲೆ ಡಿಕ್ಕಿ ಹೊಡೆದಿದ್ದರಿಂದ ಗಾಯವಾಗಿದೆ.
ಆಗ ಅವರ ಬೆಂಗಾವಲು ವಾಹನದ ಎದುರು ಹಠಾತ್ತಾಗಿ ಕಾರೊಂದು ಬಂದಿತ್ತು. ಅಪಘಾತ ತಪ್ಪಿಸುವ ಸಲುವಾಗಿ ಮಮತಾ ಅವರ ಕಾರು ಚಾಲಕ ತಕ್ಷಣವೇ ಬ್ರೇಕ್ ಹಾಕಿದ್ದಾರೆ. ಇದರಿಂದ ಟಿಎಂಸಿ ನಾಯಕಿಗೆ ಗಾಯಗಳಾಗಿವೆ ಮಮತಾ ಅವರ ತಲೆಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅವರನ್ನು ಕೋಲ್ಕತಾಗೆ ವಾಪಸ್ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.