ಒಡಿಶಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಹದಗೆಟ್ಟಿರುವ ನವೀನ್ ಬಾಬು ಅವರ ಆರೋಗ್ಯದ ಬಗ್ಗೆ ತನಿಖೆ ನಡೆಸಲು ಜೂನ್ 10ರ ನಂತರ ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಚುನಾವಣಾ ರ್ಯಾಲಿಯಲ್ಲಿ ಸಿಎಂ ಆಪ್ತ ಮತ್ತು ಬಿಜೆಡಿ ನಾಯಕ ವಿಕೆ ಪಾಂಡಿಯನ್ ನಡುಗುತ್ತಿರುವ ಕೈ ಹಿಡಿದ ವಿಡಿಯೋ ವೈರಲ್ ಆಗಿದ್ದು, ಒಡಿಶಾ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಈ ಬಗ್ಗೆ ವಿಚಾರಣೆ ನಡೆಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ನವೀನ್ ಬಾಬು ಅವರ ಆಪ್ತರು ನನ್ನನ್ನು ಭೇಟಿಯಾದಾಗಲೆಲ್ಲಾ ನವೀನ್ ಬಾಬು ಅವರ ಆರೋಗ್ಯದ ಬಗ್ಗೆ ಚರ್ಚಿಸುತ್ತಾರೆ. ನವೀನ್ ಬಾಬು ಅವರು ಸ್ವಂತವಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ, ಅವರು ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗಬೇಕಾಗಿದೆ. ನವೀನ್ ಬಾಬು ಅವರ ಅನಾರೋಗ್ಯದ ಹಿಂದೆ ಕೆಲವರ ಷಡ್ಯಂತ್ರವಿದೆ ಎಂಬ ಅನುಮಾನ ನಮಗಿದೆ ಎಂದು ಮೋದಿ ಹೇಳಿದ್ದಾರೆ.
ಒಡಿಶಾದ ಮಯೂರ್‌ಭಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಇತ್ತೀಚಿನ ದಿನಗಳಲ್ಲಿ ನವೀನ್ ಬಾಬು ಅವರ ಎಲ್ಲಾ ಹಿತೈಷಿಗಳು ತುಂಬಾ ಚಿಂತಿತರಾಗಿದ್ದಾರೆ. ಕಳೆದ ವರ್ಷ ನವೀನ್ ಬಾಬು ಅವರ ಆರೋಗ್ಯವು ಹೇಗೆ ಹದಗೆಟ್ಟಿದೆ ಎಂಬುದನ್ನು ನೋಡಿ ಅವರು ತುಂಬಾ ಚಿಂತಿತರಾಗಿದ್ದಾರೆ ಎಂದರು.