ಚೀನಾ: ನೈಋತ್ಯ ಪ್ರಾಂತ್ಯದ ಯುನ್ನಾನ್ನಲ್ಲಿರುವ ಆಸ್ಪತ್ರೆಯೊಂದರಲ್ಲಿ ವ್ಯಕ್ತಿ ಚಾಕುವಿನಿಂದ ಕಂಡ ಕಂಡವರ ಮೇಲೆ ದಾಳಿ ನಡೆಸಿದ್ದು, ಪರಿಣಾಮವಾಗಿ 10 ಮಂದಿ ಸಾವನ್ನಪ್ಪಿದ್ದು, 21ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಝೆನ್ಕ್ಸಿಯಾಂಗ್ ಕೌಂಟಿಯ ಸ್ಥಳೀಯ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದ್ದು, ಪೊಲೀಸರು ಶಂಕಿತನನ್ನು ಬಂಧಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಧಿಕಾರಿಗಳು ಹೆಚ್ಚಿನ ಮಾಹಿತಿಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದು, ಮತ್ತು ಸೆರೆಹಿಡಿಯಲಾದ ಶಂಕಿತನು ನಿಜವಾಗಿಯೂ ದಾಳಿಕೋರನೇ ಎಂಬುದು ಸ್ಪಷ್ಟವಾಗಿಲ್ಲ.ಈ ಘಟನೆ ಮಧ್ಯಾಹ್ನ 1.20 ರ ಸುಮಾರಿಗೆ ಸಂಭವಿಸಿದ್ದು, ಇದರಲ್ಲಿ ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಚೀನಾದಲ್ಲಿ ಈ ರೀತಿಯ ಪ್ರಕರಣಗಳು ನಡೆಯುವುದು ತುಂಬಾ ವಿರಳ, ಅಲ್ಲಿನ ನಾಗರಿಕರು ಬಂದೂಕು ಹೊಂದುವಂತಿಲ್ಲ. ಕಳೆದ ಆಗಸ್ಟ್ನಲ್ಲಿ ಯುನ್ನಾನ್ನಲ್ಲಿ, ಮಾನಸಿಕ ಅಸ್ವಸ್ಥತೆಯ ಇತಿಹಾಸ ಹೊಂದಿರುವ ವ್ಯಕ್ತಿಯೊಬ್ಬರು ಚಾಕುವಿನಿಂದ ಜನರ ಮೇಲೆ ದಾಳಿ ಮಾಡಿದ ನಂತರ ಇಬ್ಬರು ಸಾವನ್ನಪ್ಪಿದರು ಮತ್ತು ಏಳು ಮಂದಿ ಗಾಯಗೊಂಡಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.