ನಿಮ್ಮ ಸುದ್ದಿ ಬಾಗಲಕೋಟೆ
ಕಲ್ಲು ತೂರಾಟದಿಂದ ಮೃತಪಟ್ಟ ಚಾಲಕನ ಕುಟುಂಬಕ್ಕೆ ಕೆ.ಎಸ್.ಆರ್.ಟಿ.ಸಿ 30 ಲಕ್ಷ ರೂ. ಪರಿಹಾರ ಘೋಷಿಸಿದೆ.
ಜಮಖಂಡಿ ತಾಲೂಕಿನ ಕವಟಗಿ ಆರ್.ಸಿ. ಕೇಂದ್ರದ ಬಳಿ ಶುಕ್ರವಾರ ಸಾರಿಗೆ ಸಂಸ್ಥೆ ಬಸ್ ತಡೆದಿದ್ದ ದುಷ್ಕರ್ಮಿಗಳು ಚಾಲಕ ನಬಿ ರಸೂಲ್ ಅವಟಿ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಜಮಖಂಡಿ ಡಿಪೋಗೆ ಸೇರಿದ ಬಸ್ ಜಮಖಂಡಿ-ವಿಜಯಪುರ ಮಧ್ಯೆ ಸಂಚರಿಸುತ್ತಿತ್ತು. ಮುಷ್ಕರದ ಕಾರಣ ಮನೆಯಲ್ಲಿದ್ದ ರಸೂಲ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದಿದ್ದರೆ ಕೆಲಸದಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಈ ಹಿನ್ನಲೆಯಲ್ಲಿ ಗುರುವಾರವೇ ರಸೂಲ ಕರ್ತವ್ಯಕ್ಕೆ ಹಾಜರಾಗಿದ್ದರು. ಶುಕ್ರವಾರ ಚಿಕ್ಕಪಡಸಲಗಿ ಬ್ಯಾರೇಜ್ ಗೂ ಮುನ್ನ ಕವಟಗಿ ಆರ್.ಸಿ. ಕೇಂದ್ರದ ಬಳಿ ಬರುತ್ತಿದ್ದಂತೆ ಹಿಂದಿನಿಂದ ಬೈಕ್ ನಲ್ಲಿ ಬಂದ ನಾಲ್ವರು ಅಪರಿಚಿತರು ಬಸ್ ಅಡ್ಡ ಹಾಕಿ ಏಕಾಏಕಿ ಕಲ್ಲು ತೂರಾಟ ನಡೆಸಿದರು.
ಈ ವೇಳೆ ಚಾಲಕ ನಬಿ ರಸೂಲ್ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಮಾರ್ಗ ಮಧ್ಯೆ ಸಾವನ್ನಪ್ಪಿದರು.
ಜಮಖಂಡಿಯಲ್ಲಿನ ಮೃತ ನಬಿ ರಸೂಲ್ ಅವಟಿ ಕುಟುಂಬಕ್ಕೆ ಶುಕ್ರವಾರ ತೆರಳಿದ ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಕುಟುಂಬ ಸದಸ್ಯರಿಗೆ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರು ಆಗಮಿಸಿ 30 ಲಕ್ಷ ರೂ. ಪರಿಹಾರ ನೀಡಲಿದ್ದಾರೆ. ಚಾಲಕನ ಕುಟುಂಬ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ, ಮೃತ ಚಾಲಕನ ಪತ್ನಿಗೆ ಪಿಂಚಣಿ ವ್ಯವಸ್ಥೆ ಮಾಡಲಾಗುವುದು ಎಂದರು.
ನೌಕರರು ಶಾಂತಿಯುತ ಪ್ರತಿಭಟನೆ ನಡೆಸಬೇಕು. ಘಟನೆ ಬಗ್ಗೆ ಎಸ್.ಪಿ. ಲೋಕೇಶ್ ಜಗಲಾಸರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹೇಳಿದರು.