ವಾಷಿಂಗ್ಟನ್ : ಶೀತಲ ಸಮರದ ಬಳಿಕ ಇದೇ ಮೊದಲ ಬಾರಿಗೆ ಅತಿ ದೊಡ್ಡ ಸಮರಾಭ್ಯಾಸಕ್ಕೆ ನ್ಯಾಟೋ ಮುಂದಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಸ್ಟೆಡ್ ಫಾಸ್ಟ್ ಡಿಫೆಂಡರ್ 2024 ಎಂದು ಹೆಸರಿಸಲಾಗಿರುವ ಈ ಜಂಟಿ ಸಮರಾಭ್ಯಾಸದಲ್ಲಿ ನ್ಯಾಟೋ ಮೈತ್ರಿ ಕೂಟದ ಎಲ್ಲ ದೇಶಗಳ ಸೈನಿಕರೂ ಭಾಗಿಯಾಗಲಿದ್ದು, ಅದರಲ್ಲೂ ರಷ್ಯಾ ಗಡಿಯಲ್ಲಿ ಬರುವ ದೇಶಗಳಲ್ಲಿ ಸಮರಾಭ್ಯಾಸ ನಡೆಯಲಿದ್ದು, ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳ ಸದಸ್ಯ ರಾಷ್ಟ್ರಗಳು ಈ ಐತಿಹಾಸಿಕ ಸಮರಾಭ್ಯಾಸಕ್ಕೆ ದೊಡ್ಡ ಪ್ರಮಾಣದಲ್ಲಿ ಸಿದ್ದತೆ ನಡೆಸಿದೆ.
ಸುಮಾರು 90 ಸಾವಿರಕ್ಕೂ ಹೆಚ್ಚು ಸೈನಿಕರು ಈ ಸಮರಾಭ್ಯಾಸದಲ್ಲಿ ಭಾಗಿಯಾಗಲಿದ್ದಾರೆ. ಈ ಯುದ್ಧಾಭ್ಯಾಸ ಕಾರ್ಯಕ್ರಮದಲ್ಲಿ ಸುಮಾರು 50 ಯುದ್ದ ನೌಕೆಗಳು ಭಾಗಿಯಾಗಲಿವೆ. ಯುದ್ಧ ವಿಮಾನ ವಾಹನ ನೌಕೆಗಳು, ಡೆಸ್ಟ್ರಾಯರ್‌ಗಳೂ ಸೇರಿದಂತೆ ಹಲವು ವಿಧದ ನೌಕೆಗಳು ಸಮರಾಭ್ಯಾಸಕ್ಕೆ ಕೈ ಜೋಡಿಸಲಿವೆ.
ರಷ್ಯಾ ದೇಶದ ಗಡಿ ಭಾಗದಲ್ಲಿ ಇರುವ ಐರೋಪ್ಯ ರಾಷ್ಟ್ರಗಳಿಗೆ ಉತ್ತರ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ಆದಷ್ಟು ಬೇಗ ದೊಡ್ಡ ಪ್ರಮಾಣದ ಸೈನಿಕರು, ಶಸ್ತ್ರಾಸ್ತ್ರಗಳನ್ನು ರವಾನಿಸುವ ತರಬೇತಿ ಕಾರ್ಯಕ್ರಮ ಇದಾಗಿದ್ದು, ಅಮೆರಿಕ ಹಾಗೂ ರಷ್ಯಾ ನಡುವೆ ಬಿಕ್ಕಟ್ಟು ಹೆಚ್ಚಾಗುತ್ತಿರುವ ನಡುವಲ್ಲೇ ಆಯೋಜನೆಗೊಂಡಿರುವ ಈ ಸಮರಾಭ್ಯಾಸ ಸಾಕಷ್ಟು ಕುತೂಹಲ ಕೆರಳಿಸಿದೆ.