This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಯಾರಿಗೆ ಬಿಡಿಸಿಸಿ ಚುಕ್ಕಾಣೆ?

ಬಿಜೆಪಿಗೋ ಅಥವಾ ಕಾಂಗ್ರೆಸ್‌ಗೋ

ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಕ್ಷೇತ್ರವಾದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಚುಕ್ಕಾಣೆ ಹಿಡಿಯಲು ಸದ್ದಿಲ್ಲದೆ ಎರಡೂ ಪಕ್ಷಗಳು ಬಿರುಸಿನ ಚಟುವಟಿಕೆಯಲ್ಲಿ ತೊಡಗಿವೆ.

೧೩ ಸದಸ್ಯ ಬಲದ ನಿರ್ದೇಶಕರಲ್ಲಿ ೬ ನಿರ್ದೇಶಕರು ಕಾಂಗ್ರೆಸ್ ಬೆಂಬಲಿಗರಿದ್ದು ೫ ನಿರ್ದೇಶಕರು ಬಿಜೆಪಿ ಬೆಂಬಲಿಗರಿದ್ದಾರೆ. ಎರಡೂ ಪಕ್ಷದ ತಲಾ ಒಬ್ಬರು ರೆಬಲ್‌ಗಳು ಜಯಶಾಲಿಗಳಾಗಿದ್ದು ಇವರಿಬ್ಬರು ಕೈಗೊಳ್ಳುವ ನಿರ್ಧಾರ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ ಎನ್ನಲಾಗಿದೆ. ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗಧಿಯಾಗಿದೆ.

ಸದ್ಯಕ್ಕೆ ರೆಬಲ್‌ಗಳಾದ ಕುಮಾರಗೌಡ ಜನಾಲಿ ಹಾಗೂ ಮುರಗೇಶ ಕಡ್ಲಿಮಟ್ಟಿ ಅವರನ್ನು ಎರಡೂ ಪಕ್ಷದ ಮುಖಂಡರು ಭೇಟಿ ಮಾಡಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಮ್ಮವರನ್ನೇ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೆ ಒಂದು ಸುತ್ತು ಇಬ್ಬರನ್ನೂ ಬಿಜೆಪಿ ಮುಖಂಡರು ನಿಮ್ಮೊಂದಿಗೆ ನಾವಿದ್ದು ನಮ್ಮನ್ನು ಬೆಂಬಲಿಸಿ ಎಂದು ಕೇಳಿಕೊಂಡಿದ್ದಾರೆ. ಕಾಂಗ್ರೆಸ್ ಮುಖಂಡರೂ ಸಹ ಇವರಿಬ್ಬರನ್ನು ಭೇಟಿ ಮಾಡಿದ್ದಾರೆಂಬ ಮಾಹಿತಿ ಇದ್ದು ಯಾರಿಗೂ ಸ್ಪಷ್ಟ ಭರವಸೆ ದೊರೆತಿಲ್ಲದ ಕಾರಣ ಮಂಗಳವಾರದ ಚುನಾವಣೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಮಧ್ಯೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷದಲ್ಲೂ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಸಮಯ ಕಳೆದಂತೆ ಬದಲಾವಣೆಗಳು ನಡೆದು ಎರಡೂ ಪಕ್ಷದಲ್ಲೂ ಮುನಿಸು ಆರಂಭವಾದರೂ ಅಚ್ಚರಿಯಿಲ್ಲ. ಇದು ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಬಿಜೆಪಿಯಲ್ಲಿ ಹಿರಿಯ ಜೀವಿ ರಾಮಣ್ಣ ತಳೇವಾಡ, ಹನಮಂತ ನಿರಾಣಿ, ಪ್ರಕಾಶ ತಪಶೆಟ್ಟಿ ಪ್ರಮುಖ ಆಕಾಂಕ್ಷಿಗಳಾಗಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಎಚ್.ವೈ.ಮೇಟಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂಬ ಮಾತು ಕೇಳಿದೆ.

ಸದ್ಯದ ಲೆಕ್ಕಾಚಾರದಂತೆ ೬ ನಿರ್ದೇಶಕರನ್ನು ಹೊಂದಿರುವ ಕಾಂಗ್ರೆಸ್‌ಗೆ ಹಿಂದಿನ ಅಧ್ಯಕ್ಷರನ್ನೇ ಪುನ: ಆಯ್ಕೆ ಮಾಡಿದ್ದಾದರೆ ಬಿಜೆಪಿಯ ಬಂಡಾಯ ಅಭ್ಯರ್ಥಿ ಅವರಿಗೆ ಬೆಂಬಲ ನೀಡಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ. ಹೀಗಾದರೆ ೬ ಸದಸ್ಯರೊಂದಿಗೆ ಇಬ್ಬರೂ ಬಂಡಾಯಗಾರರನ್ನು ತಮ್ಮತ್ತ ಸೆಳೆಯುವ ತಂತ್ರ ರೂಪಿಸಿ ಆಡಳಿತ ಚುಕ್ಕಾಣಿ ಹಿಡಿಯುವ ಮನಸ್ಸು ಮಾಡಿದೆ ಎನ್ನಲಾಗಿದೆ.

ಮತ್ತೊಂದೆಡೆ ೫ ನಿರ್ದೇಶಕರು ಬಿಜೆಪಿಯವರಿದ್ದು ಇಬ್ಬರು ನಾಮನಿರ್ದೇಶನಗೊಂಡಿದ್ದಾರೆ. ತಮ್ಮವರೇ ಆದ ಬಂಡಾಯಗಾರರಾದ ಕುಮಾರಗೌಡ ಜನಾಲಿ ಅವರು ಬಿಜೆಪಿಯನ್ನು ಬೆಂಬಲಿಸಲಿದ್ದು ಸಹಕಾರ ಸಂಘಗಳ ಉಪ ನಿಬಂಧಕರ ಮತ ಸೇರಿ ಬಿಜೆಪಿಗೆ ೯ ಮತ ದೊರೆಯಲಿದ್ದು ಈ ಬಾರಿ ಬಿಜೆಪಿ ಆಡಳಿತ ಗ್ಯಾರಂಟಿ ಎಂಬ ವಿಶ್ವಾಸದಲ್ಲಿ ಬಿಜೆಪಿ ಇದೆ.

ಈ ಮಧ್ಯೆ ಸರಕಾರದಿಂದ ನಾಮನಿರ್ದೇಶನಗೊಂಡ ನಿರ್ದೇಶಕರೊಬ್ಬರ ನೇಮಕಾತಿ ಕುರಿತಂತೆ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿದ್ದು ನಿರ್ದೇಶನಗೊಂಡವರು ಮತದಾನ ಮಾಡಿದರೂ ಫಲಿತಾಂಶ ಘೋಷಣೆಯಲ್ಲಿ ನ.೧೭ರಂದು ಪರಿಗಣಿಸುವಂತಿಲ್ಲ. ಅದು ನ.೧೮ರಂದು ಹೈಕೋರ್ಟ್ ನಲ್ಲಿ ವಿಚಾರಣೆ ಬಳಿಕ ಅಂತಿಮಗೊಳ್ಳಲಿದೆ. ಒಟ್ಟಾರೆ ಮಂಗಳವಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದರೂ ಅದೇ ದಿನ ಫಲಿತಾಂಶ ಘೋಷಣೆಯಾಗುವುದು ಅನುಮಾನ. ನ.೧೮ರಂದು ಕೋರ್ಟ್ ನೀಡುವ ಅಂತಿಮ ತೀರ್ಪಿನವರೆಗೂ ಕಾಯಲೇಬೇಕಾದ ಅನಿವಾರ್ಯತೆ ಬರಬಹುದು ಎನ್ನಲಾಗಿದೆ.

ಪ್ರಬಲ ಆಕಾಂಕ್ಷಿ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಸಹಕಾರಿ ಧುರೀಣ ರಾಮಣ್ಣ ತಳೇವಾಡ ತಿಳಿಸಿದ್ದಾರೆ. ತಮ್ಮ ಅಧಿಕಾರದ ಅವಧಿಯಲ್ಲಿಯೇ ಪ್ರಧಾನ ಕಚೇರಿ ನಿರ್ಮಿಸಲಾಗಿದೆ. ಈ ಬಾರಿ ಡಿಸಿಸಿಯಲ್ಲಿ ತಮ್ಮದೇ ಆಡಳಿತ ಬರಬೇಕು ಎಂದು ತಿಳಿಸಿದ್ದಾರೆ.

 

Nimma Suddi
";