ಕಾಂಗ್ರೆಸ್ ಭವನಕ್ಕಾಗಿ ಜೋಳಿಗೆ ಹಿಡಿದ ಜಿಲ್ಲಾಧ್ಯಕ್ಷ
ನಿಮ್ಮ ಸುದ್ದಿ ಬಾಗಲಕೋಟೆ
ಪಕ್ಷದ ಕಚೇರಿ ನಿರ್ಮಿಸಲು ಜಿಲ್ಲಾಧ್ಯಕ್ಷರೇ ಜೋಳಿಗೆ ಹಿಡಿದು ಸ್ವಂತ ಗ್ರಾಮದಲ್ಲಿ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದ್ದಾರೆ.
ಹೌದು…. ಇದು ವಿಚಿತ್ರವಾದರೂ ಸತ್ಯ. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಪಕ್ಷದ ಜಿಲ್ಲಾ ಕಟ್ಟಡ ನಿರ್ಮಾಣಕ್ಕಾಗಿ ಜೋಳಿಗೆ ಮೂಲಕ ಕಾರ್ಯಕರ್ತರು, ಅಭಿಮಾನಿಗಳಿಂದ ದೇಣಿಗೆ ಸಂಗ್ರಹಕ್ಕೆ ತಮ್ಮ ಸ್ವಂತ ಊರು ಸೂಳೇಬಾವಿಯಲ್ಲಿ ಚಾಲನೆ ನೀಡಿದ್ದಾರೆ.
ಪಕ್ಷದ ಕಟ್ಟಡಕ್ಕೆ ಜೋಳಿಗೆಯೊಂದಿಗೆ ದೇಣಿಗೆ ಸಂಗ್ರಹ ಆರಂಭಿಸಿ ಮಾತನಾಡಿದ ಅವರು, ೨೦ ವರ್ಷದ ಹಿಂದೆ ಆರ್.ಎಸ್.ಪಾಟೀಲ ಸಂಸದರು ಹಾಗೂ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಅಡಿಗಲ್ಲು ಸಮಾರಂಭ ಮಾಡಿದ್ದರು. ಆದರೆ ಯೋಗ ಕೂಡಿ ಬರದಿದ್ದರಿಂದ ಇದುವರೆಗೂ ಪಕ್ಷದ ಜಿಲ್ಲಾ ಕಚೇರಿ ಬಾಡಿಗೆಯಲ್ಲೇ ನಡೆಯುತ್ತಿದೆ. ಇದನ್ನು ಮನಗಂಡು ಒಂದು ವರ್ಷದ ಹಿಂದೆ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಟ್ಟಡ ಪೂರ್ಣಗೊಳಿಸಲೇಬೇಕು ಎಂಬ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದ್ದೇನೆ ಎಂದರು.
ಸದ್ಯ ಕಟ್ಟಡ ನಿರ್ಮಾಣದ ಹಂತದಲ್ಲಿದ್ದು ಪೂರ್ಣಗೊಳ್ಳಲು ಅಂದಾಜು ೫೦ ಲಕ್ಷ ರೂ. ವೆಚ್ಚವಾಗಬಹುದು ಎಂದು ಲೆಕ್ಕ ಹಾಕಲಾಗಿದೆ. ಈಗಾಗಲೆ ಅಜಯಕುಮಾರ ಸರನಾಯಕ, ಆರ್.ಬಿ.ತಿಮ್ಮಾಪೂರ, ಉಮಾಶ್ರೀ, ಆನಂದ ನ್ಯಾಮಗೌಡ, ಡಾ.ಬೆಳಗಲಿ, ಡಾ.ಪದ್ಮಜಿತ್ ನಾಡಗೌಡರ ಸೇರಿದಂತೆ ಹಲವು ದೇಣಿಗೆ ನೀಡಿದ್ದಾರೆ. ಶ್ರೀಮಂತರು, ಅಕಾರದಲ್ಲಿದ್ದವರು, ಕಾಂಗ್ರೆಸ್ ಫಲಾನುಭವಿಗಳ ಕೊಡುಗೆಗಿಂತ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಕಾರ್ಯಕರ್ತ, ಅಭಿಮಾನಿಗಳ ೧೦೦ ರೂ. ದೊಡ್ಡದಾಗುತ್ತದೆ. ಆ ಮೂಲಕ ಜಿಲ್ಲಾ ಕಚೇರಿ ನಮ್ಮದು ಎಂಬ ಭಾವನೆ ಮೂಡಬೇಕು. ಹೀಗಾಗಿ ಕಾರ್ಯಕರ್ತರಿಂದ ದೇಣಿಗೆ ಸಂಗ್ರಹಕ್ಕೆ ಜೋಳಿಗೆ ಹಿಡಿದು ನಮ್ಮ ಗ್ರಾಮದಿಂದಲೇ ಆರಂಭಿಸಿದ್ದೇನೆ ಎಂದು ಹೇಳಿದರು.
ಸೂಳೇಭಾವಿ ಗ್ರಾಮದ ರಾಜರಾಜೇಶ್ವರಿ ಸಹಕಾರಿ ಸಂಘದ ನಿರ್ದೇಶಕರಿಂದ ೪೫ ಸಾವಿರ, ಮಹಾಲಕ್ಷಿö್ಮ ನೇಕಾರ ಉತ್ಪಾದಕ ಸಹಕಾರಿ ಸಂಘದ ನಿರ್ದೇಶಕರಿಂದ ೫ ಸಾವಿರ, ಶಾಖಾಂಬರಿ ಸಹಕಾರಿ ಸಂಘದ ನಿರ್ದೇಶಕರಿಂದ ೫ ಸಾವಿರ, ಗ್ರಾಪಂ ಮಾಜಿ ಅಧ್ಯಕ್ಷ ನಾಗೇಂದ್ರಸಾ ನಿರಂಜನ ೨,೫೦೦ ರೂ., ಇಳಕಲ್‌ನ ಉದ್ಯಮಿ ರಾಜು ಬೋರಾ ೩೦ ಸಾವಿರ ಹೀಗೆ ಒಟ್ಟು ೮೯ ಸಾವಿರ ರೂ. ದೇಣಿಗೆ ಸಂಗ್ರಹಿಸಲಾಯಿತು.
ಮಾಬುಲಾಲ್ ದೊಡಮನಿ, ಬಸು ಮಿಣಜಗಿ, ವಾಸು ಹಿಂದಿನಮನಿ, ಗದಗಯ್ಯ ನಂಜಯ್ಯನಮಠ, ಈರಪ್ಪ ಮಿಣಜಗಿ, ಹನಮಂತ ಘಂಟಿ, ಮಲ್ಲಪ್ಪ ನೆಮದಿ, ರವಿ ಭಾಪ್ರಿ, ಮಹಾಬಳೇಶಪ್ಪ ದೂಪದ, ಮುರ್ತುಜಾ ಮಾಗಿ, ನಾಗೇಂದ್ರಸಾ ನಿರಂಜನ, ರ‍್ಯಾವಪ್ಪ ನೆಮದಿ, ಯಂಕಣ್ಣ ಮಿಣಜಗಿ, ಈರಪ್ಪ ಚಂದ್ರಾಯಿ ಇತರರು ಇದ್ದರು.
“ನಮ್ಮೂರಿನಿಂದಲೇ ಕಾಂಗ್ರೆಸ್ ಭವನ ನಿರ್ಮಾಣಕ್ಕಾಗಿ ಜೋಳಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೂ ನಮ್ಮ ಕಚೇರಿ ಎಂಬ ಅಭಿಮಾನ ಮೂಡಬೇಕು. ಈ ನಿಟ್ಟಿನಲ್ಲಿ ಆರಂಭವಾದ ಕಾರ್ಯಕ್ಕೆ ಅಭೂತಪೂರ್ವ ಸ್ವಾಗತ ದೊರೆತಿದೆ.”
-ಎಸ್.ಜಿ.ನಂಜಯ್ಯನಮಠ, ಕಾಂಗ್ರೆಸ್ ಜಿಲ್ಲಾಧ್ಯಕ್ಷ.