ನಿಮ್ಮ ಸುದ್ದಿ ಬೆಂಗಳೂರು
ಬಂಗಾಳ ಉಪಸಾಗರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದೆಲ್ಲೆಡೆ ೨ ದಿನ ಭಾರಿ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮತ್ತೆ ಮಳೆ ಎಂಬ ಸುದ್ದಿ ಕೇಳಿದ ರೈತಾಪಿ ವರ್ಗ ಆತಂಕಕ್ಕೊಳಗಾಗಿದೆ. ಕಳೆದೊಂದು ತಿಂಗಳ ಹಿಂದಷ್ಟೇ ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಅತಿವೃಷ್ಠಿಯಾಗಿ ಬೆಳೆದ ಬೆಳೆಯಲ್ಲ ನೀರು ಪಾಲಾಗಿತ್ತು. ನಿರಂತರ ಮಳೆಯಿಂದಾಗಿ ಕೈಗೆ ಬಂದ ಬೆಳೆ ನೀರಲ್ಲಿ ಕೊಚ್ಚಿ ಹೋಗಿತ್ತು. ಸಾವಿರಾರು ಮನೆಗಳು ಹಾನಿಗೀಡಾಗಿದ್ದವು. ಕೃಷಿ ಇಲಾಖೆಯೂ ಸಹ ಅಪಾರ ಹಾನಿ ಕುರಿತು ಸರಕಾರಕ್ಕೆ ವರದಿ ಸಲ್ಲಿಸಿತ್ತು.
ಅಂದು ಸುರಿದ ಮಳೆಯಿಂದಾಗಿ ಕಂಗಾಲಾದ ರೈತರಿಗೆ ಇಂದಿಗೂ ಸರಿಯಾಗಿ ಪರಿಹಾರ ದೊರೆತಿಲ್ಲ. ಸದ್ಯ ಮತ್ತೆ ಮಳೆ ಮುನ್ಸೂಚನೆ ಸುದ್ದಿ ಕೇಳಿ ರಾಜ್ಯದ ರೈತಾಪಿ ವರ್ಗ ಬೆಚ್ಚಿ ಬೀಳುವಂತಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆಯಂತೆ ನವೆಂಬರ್ ೨೫ ಹಾಗೂ ೨೬ರಂದು ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಚಾಮರಾಜನಗರ ಭಾಗಗಳಲ್ಲಿ ಮಳೆ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಬುಧವಾರ ಮತ್ತು ಗುರುವಾರದಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿವಾರ್ ಹೆಸರಿನ ಈ ಚಂಡಮಾರುತ ನಾಳೆ ಪುದುಚೇರಿ ಹಾಗೂ ತಮಿಳುನಾಡು ಕರಾವಳಿ ಮೂಲಕ ಬರುವ ಸಾಧ್ಯತೆ ಇದೆ. ಕರ್ನಾಟಕ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.