ಅಜಯಕುಮಾರಗೆ ಶುಕ್ರದೆಸೆ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಹುಮತವಿದ್ದರೂ ಬಿಜೆಪಿಗೆ ಸೋಲು ಅನುಭವಿಸಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಬೆಂಬಲಿತರಿಗೆ ಬಹುಮತವಿದ್ದರೂ ಕಾಂಗ್ರೆಸ್ ಬೆಂಬಲಿತರೇ ಎರಡೂ ಸ್ಥಾನಗಳಿಗೆ ಆಯ್ಕೆ ಆಗಿದ್ದು ಅಡ್ಡ ಮತದಾನ ಹಾಗೂ ಹೊಂದಾಣಿಕೆ ರಾಜಕಾರಣದಿಂದ ಕಾಂಗ್ರೆಸ್ ಬೆಂಬಲಿತರಿಗೆ ಜಯ ಲಭಿಸಿದೆ.
ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಅಜಯ್‌ಕುಮಾರ್ ಸರನಾಯಕ, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನಿಂದ ಬಂಡಾಯ ಸ್ಪರ್ಧೆ ಮಾಡಿ ಗೆದ್ದ ಮುರುಗೇಶ್ ಕಡ್ಲಿಮಟ್ಟಿ ಆಯ್ಕೆಯಾಗಿದದಾರೆ. ಆ ಮೂಲಕ ಪ್ರತಿಷ್ಠಿತ ಬಿಡಿಸಿಸಿ ಅಧಿಕಾರ ಭಾಗ್ಯ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ. ಈ ಬಾರಿ ಶತಾಯಗತಾಯ ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಬಿಜೆಪಿಗರಿಗೆ ಮುಖಭಂಗವಾಗಿದೆ.
ಬಿಜೆಪಿ ಬೆಂಬಲಿತರಿಗೆ ಬರಬೇಕಿದ್ದ ೮ ಮತಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿದ್ದು, ಬಿಜೆಪಿ ಪಾಳಯದಲ್ಲಿ ಪಕ್ಷಕಿಂತ ಜಾತಿ ನಿಷ್ಠೆ ಮುಖ್ಯ ಎನ್ನುವುದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ತೋರಿದ್ದು ಚರ್ಚಿತ ವಿಷಯವಾಗಿದೆ.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಒಟ್ಟು ೧೩ ಸ್ಥಾನ, ಓರ್ವ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರಿ ಸಂಘಗಳ ಉಪನಿಬಂಧಕರು, ರಾಜ್ಯ ಸರ್ಕಾರದ ನಾಮ ನಿರ್ದೇಶನ ಮತ ಸೇರಿ ೧೬ ಮತಗಳಲ್ಲಿ ೧೫ ಮತ ಚಲಾವಣೆಗೊಂಡಿದ್ದವು. ಆದರೆ ರಾಜ್ಯ ಸರ್ಕಾರದ ನಾಮನಿರ್ದೇಶನ ನೇಮಕ ಪ್ರಶ್ನಿಸಿ ಕಾಂಗ್ರೆಸ್ ಬೆಂಬಲಿತ ಅಜಯ್‌ಕುಮಾರ್ ಸರನಾಯಕ ಧಾರವಾಡ ಹೈಕೋರ್ಟ್ನಲ್ಲಿ ಬಿಡಿಸಿಸಿ ಬ್ಯಾಂಕ್‌ನಲ್ಲಿ ರಾಜ್ಯ ಸರ್ಕಾರದ ಷೇರು ಬಂಡವಾಳ ಇಲ್ಲ. ಇದರಿಂದಾಗಿ ನಾಮ ನಿರ್ದೇಶನ ಮಾಡುವುದಕ್ಕೆ ಬರುವುದಿಲ್ಲ ಎಂದು ಅರ್ಜಿ ಸಲ್ಲಿಸಿದ್ದರು. ನವೆಂಬರ್ ೨೫ರಂದು ಧಾರವಾಡ ಹೈಕೋರ್ಟ್, ರಾಜ್ಯ ಸರ್ಕಾರದ ನಾಮ ನಿರ್ದೇಶನ ನಿರ್ದೇಶಕ ಮತ ಹೊರತು ಪಡಿಸಿ ಉಳಿದ ಮತ ಎಣಿಕೆಗೆ ಅವಕಾಶ ಕಲ್ಪಿಸಿ ಆದೇಶಿಸಿತ್ತು. ಹೀಗಾಗಿ ಶುಕ್ರವಾರ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬೆಳಿಗ್ಗೆ ೧೧ಕ್ಕೆ ಮತ ಎಣಿಕೆ ಕಾರ್ಯ ಚುನಾವಣಾಧಿಕಾರಿ ಎಂ.ಗಂಗಪ್ಪ ನೇತೃತ್ವದಲ್ಲಿ ನಡೆಯಿತು.
ಮತ ಎಣಿಕೆಯಾದ ೧೪ ಮತಗಳಲ್ಲಿ ಕಾಂಗ್ರೆಸ್ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಜಯ್‌ಕುಮಾರ್ ಸರನಾಯಕ ಅವರಿಗೆ ೮ ಮತ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮುರುಗೇಶ್ ಕಡ್ಲಿಮಟ್ಟಿ ೮ ಮತಗಳು, ಹಾಗೂ ಬಿಜೆಪಿ ಬೆಂಬಲಿತರಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್‌ಗೌಡ ಜನಾಲಿ ೬ ಮತ, ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಕಾಶ್ ತಪಶೆಟ್ಟಿಗೆ ೬ ಮತಗಳು ಬಂದಿದ್ದು, ಎರಡು ಮತಗಳಿಂದ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎನ್ನುವುದು ಎರಡಂಕಿಯ ಮೇಲೆ ನಿಂತಿತ್ತು. ಬಿಜೆಪಿ ಬೆಂಬಲಿತ ಇಬ್ಬರು ನಿರ್ದೇಶಕರು ಕಾಂಗ್ರೆಸ್ ಬೆಂಬಲಿತರಿಗೆ ಮತ ಚಲಾಯಿಸಿದ್ದು, ಬಿಡಿಸಿಸಿ ಬ್ಯಾಂಕ್‌ನಲ್ಲಿ ಜಾತಿ ನಿಷ್ಠೆ ವರ್ಕೌಟ್ ಆಗಿದೆ. ರೆಡ್ಡಿ ಸಮುದಾಯಕ್ಕೆ ಸೇರಿದ ಅಜಯ್‌ಕುಮಾರ್ ಸರನಾಯಕ ಮೂರನೇ ಬಾರಿಗೆ ಬಿಡಿಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಧಣಿ ಹಿಡಿತದಲ್ಲಿ ಬಿಡಿಸಿಸಿ ಬ್ಯಾಂಕ್ ಇರಬೇಕು ಎನ್ನುವ ಒಂದೇ ಒಂದು ಕಾರಣಕ್ಕೆ ಪಕ್ಷ ನಿಷ್ಠೆ ಮಕಾಡೆ ಮಲಗಿದೆ. ಬಹುಮತವಿದ್ದರೂ ಬಿಜೆಪಿಗೆ ಅಧಿಕಾರ ಭಾಗ್ಯವಿಲ್ಲ;
ಜಿಲ್ಲೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಸೇರಿದಂತೆ ಘಟಾನುಘಟಿ ಬಿಜೆಪಿ ನಾಯಕರಿದ್ದಾರೆ. ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿಗೆ ಅಧಿಕಾರ ತಪ್ಪುತ್ತಿದೆ ಎಂದು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಮಾತು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಚುನಾವಣೆಯಲ್ಲೂ ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಚುಕ್ಕಾಣಿ ಹಿಡಿಯುವುದಕ್ಕೆ ಆಗಲಿಲ್ಲ.
ಇದೀಗ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಮತ್ತೆ ಹೊಂದಾಣಿಕೆ ರಾಜಕಾರಣ, ಜಾತಿ ಪ್ರತಿಷ್ಠೆ ಎನ್ನುವುದು ಸಾಬೀತಾಗಿದೆ. ಈ ಬಾರಿ ಬಿಡಿಸಿಸಿ ಬ್ಯಾಂಕ್ ಅಧಿಕಾರ ಚುಕ್ಕಾಣಿ ಬಿಜೆಪಿಗೆ ತೆಗೆದುಕೊಳ್ಳಲು ಸಿಎಂ ಬಿಎಸ್ವೈ ಸೂಚನೆ ಮೇರೆಗೆ ಡಿಸಿಎಂ ಗೋವಿಂದ ಕಾರಜೋಳ ಬಾಗಲಕೋಟೆಯಲ್ಲಿ ಎರಡು ದಿನ ಠಿಕಾಣಿ ಹೂಡಿ, ಬಿಜೆಪಿ ಬೆಂಬಲಿತ ನಿರ್ದೇಶಕರು, ಶಾಸಕರೊಂದಿಗೆ ಸಭೆ ನಡೆಸಿದ್ದರು. ಇದೀಗ ಬಿಜೆಪಿ ಬೆಂಬಲಿತರಿಗೆ ಅಧಿಕಾರ ಭಾಗ್ಯ ಸಿಗದಿರುವುದು ಡಿಸಿಎಂ ಗೋವಿಂದ ಕಾರಜೋಳರಿಗೂ ಮುಖಭಂಗವಾದಂತಾಗಿದೆ.
ಈ ಸೋಲು ನಮ್ಮ ಸೋಲು ಅಲ್ಲ ನಮ್ಮ ಜಿಲ್ಲಾ ವರಿಷ್ಠರು, ಡಿಸಿಎಂ ಗೋವಿಂದ ಕಾರಜೋಳರ ಸೋಲು, ಸೋಲಿನ ಪರಾಮರ್ಶೆಗೆ ವರಿಷ್ಠರಿಗೆ ದೂರು ನೀಡುತ್ತೇವೆ ಎಂದು ಪರಾಜಿತ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿ ಪ್ರಕಾಶ್ ತಪಶೆಟ್ಟಿ ತಿಳಿಸಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಮಗೆ ಬರಬೇಕಿದ್ದ ೮ ಮತಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗಿವೆ. ಈ ಬಗ್ಗೆ ವರಿಷ್ಠರು ಚರ್ಚೆ ನಡೆಸಬೇಕೆಂದು ಪರೋಕ್ಷವಾಗಿ ಅಡ್ಡಮತದಾನವಾಗಿದೆ ಎಂದು ಪರಾಜಿತ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕುಮಾರ್ ಗೌಡ ಜನಾಲಿ ತಿಳಿಸಿದರು.
ಮೂರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಅಜಯ್‌ಕುಮಾರ್ ಸರನಾಯಕ ಮಾತನಾಡಿ, ನನ್ನ ಗೆಲುವಿಗೆ ಸಹಕರಿಸಿದ ಎಲ್ಲ ನಿರ್ದೇಶಕರಿಗೂ ಧನ್ಯವಾದಗಳು. ಇದು ಸಹಕಾರಿ ಕ್ಷೇತ್ರದ ಚುನಾವಣೆ. ಇಲ್ಲಿ ಪಕ್ಷ ಬರುವುದಿಲ್ಲ. ಬ್ಯಾಂಕ್ ಅಭಿವೃದ್ಧಿ ಹಿತದೃಷ್ಟಿಯಿಂದ ಎಲ್ಲರೂ ಸೇರಿ ಕೆಲಸ ಮಾಡುತ್ತೇವೆ. ಅಡ್ಡಮತದಾನ, ಆಪರೇಷನ್ ಹಸ್ತ ವಿಚಾರವನ್ನು ಅಲ್ಲಗಳೆದರು. ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಗೈರಾದ ವಿಜಯಾನಂದ ಕಾಶಪ್ಪನವರ್ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ಚುನಾವಣೆ ವೇಳೆ ಮತ ಚಲಾಯಿಸುವಂತೆ ನಾವೆಲ್ಲರೂ ಕೇಳಿದ್ದೇವೆ. ಆದರೆ ಅವರು ಮತ ಚಲಾಯಿಸಿಲ್ಲವೆಂದರು ಎಂದು ತಿಳಿಸಿದರು.