ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಸದ್ಯದಲ್ಲಿಯೇ ಲಸಿಕೆಯನ್ನು ಬರಲಿದ್ದು, ಲಸಿಕೆ ಸಂಗ್ರಹ ಸಿದ್ದತೆಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಕೋವಿಡ್-19 ತಡೆಗಟ್ಟಲು ಕೈಗೊಂಡ ಕ್ರಮಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶೀಘ್ರದಲ್ಲಿಯೇ ಕೋವಿಡ್-19 ನಿಯಂತ್ರಿಸಲು ಲಸಿಕೆಯನ್ನು ಪರಿಚಯಿಸಲಾಗುತ್ತಿದ್ದು, ಲಸಿಕೆ ಸಿದ್ದತೆಗೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.
ಮೊದಲ ಹಂತದಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತಿರುವ ಸರಕಾರಿ ಮತ್ತು ಖಾಸಗಿ ಫಲಾನುಭವಿಗಳಿಗೆ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿರುವ ಮೊದಲ ಹಂತದ ಫಲಾನುಭವಿಗಳ ವಿವರವನ್ನು ತಂತ್ರಾಂಶದಲ್ಲಿ ಅಪಲೋಡ್ ಮಾಡಬೇಕು. ಪಟ್ಟಿಯಿಂದ ಯಾರು ಬಿಟ್ಟು ಹೋಗದಂತೆ ಕ್ರಮವಹಿಸಲು ಸೂಚಿಸಿದರು. ಜಿಲ್ಲೆಯಲ್ಲಿರುವ ಕೋಲ್ಡ ಸ್ಟೋರೇಜ ವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಿಂದ ಸರಬರಾಜು ಮಾಡಿದ ನಂತರ ತಾಲೂಕಾ ಮಟ್ಟದಲ್ಲಿಯೂ ಸಹ ಶೀಥಲ ಘಟಕಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಸರಕಾರಿ ಮತ್ತು ಖಾಸಗಿ ಸೇರಿ ಈಗಾಗಲೇ 10473 ಫಲಾನುಭವಿಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ತಂತ್ರಾಂಶದಲ್ಲಿ ದಾಖಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈಗಾಗಲೇ ದಾಖಲಾದ ಫಲಾನುಭವಿಗಳ ಪೈಕಿ ಬಾದಾಮಿ ತಾಲೂಕಿನಿಂದ 1433, ಬಾಗಲಕೋಟೆ 3345, ಬೀಳಗಿ 588, ಹುನಗುಂದ 2021, ಜಮಖಂಡಿ 2216 ಹಾಗೂ ಮುಧೋಳದಲ್ಲಿ 870 ಜನ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಕೋವಿಡ್ ಲಸಿಕೆಯನ್ನು ಮೂರು ಹಂತದಲ್ಲಿ ನೀಡಲಾಗುತ್ತಿದ್ದು, ಮೊದಲನೇ ಹಂತದಲ್ಲಿ ಹೆಲ್ತಕೇರ್ ಸಿಬ್ಬಂದಿಗಳಾದ ಸರ್ಕಾರಿ ಮತ್ತು ಖಾಸಗಿ ವೈದ್ಯರು, ತಂತ್ರಜ್ಞರು, ದಾದಿಯರು, ಆಸ್ಪತ್ರೆಯ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮುಂತಾದ ಕೊರೊನಾ ವಾರಿಯರ್ಸ್ ಗಳಿಗೆ ನೀಡಲಾಗುತ್ತಿದೆ. 2ನೇ ಹಂತದಲ್ಲಿ ಪೌರಕಾರ್ಮಿಕರು, ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ಹಾಗೂ 3ನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಹಾಗೂ 50 ವರ್ಷ ಒಳಗಿರುವ ಮದುಮೇಹ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ಸಂಗ್ರಹಿಸುವ ಸಾಮಥ್ರ್ಯ ಜಿಲ್ಲೆಯಲ್ಲಿ ಹೆಚ್ಚಿಗೆ ಇದ್ದು, ಈಗಾಗಲೇ ಕೆಲವೊಂದು ಲಸಿಕೆಗಳನ್ನು ಹತ್ತಿರದ 4 ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಕೋವಿಡ್ ಲಸಿಕೆಯನ್ನು ಎರಡು ಡೋಜ್ ನೀಡಲಾಗುತ್ತಿದ್ದು, ಮೊದಲು ಒಂದು ಡೋಜ್ ನೀಡಿದ ನಂತರ ಅರ್ದ ಗಂಟೆಗಳ ಕಾಲ ಲಸಿಕೆ ಪಡೆದವರಿಗೆ ಯಾವುದಾದರೂ ರಿಯಾಕ್ಸಿನ್ ಆಗುತ್ತಿರುವ ಬಗ್ಗೆ ಗಮನಿಸಿ ನಂತರ ಕಳುಹಿಸಲು ಕ್ರಮಕೈಗೊಳ್ಳಲಾಗುವುದೆಂದು ಡಾ.ಎ.ಎನ್.ದೇಸಾಯಿ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಇಲ್ಲಿವರೆಗೆ 13622 ಕೊರೊನಾ ಪಾಜಿಟಿವ್ ಕೇಸ್ ಪತ್ತೆಯಾಗಿದ್ದು, ಈ ಪೈಕಿ 13429 ಜನ ಗುಣಮುಖರಾಗಿದ್ದಾರೆ. ಕೋವಿಡ್ ಪಾಜಿಟಿವ್ ಕೇಸ್‍ಗಳಲ್ಲಿ ಐಎಲ್‍ಐ 6226, ಸಾರಿ 734, ಪ್ರಾಥಮಿಕ ಸಂಪರ್ಕ 2351, ದ್ವಿತೀಯ ಸಂಪರ್ಕ 115, ಪ್ರವಾಸದ ಹಿನ್ನಲೆಯ 221, ಪತ್ತೆಹಚ್ಚಲಾಗುತ್ತಿರುವ ಕೇಸ್ 3975 ಇವೆ. ಹೋಮ್ ಐಸೋಲೇಷದಲ್ಲಿದ್ದ 4744 ಪೈಕಿ 28 ಜನ ಮಾತ್ರ ಸಕ್ರಿಯ ಪ್ರಕರಣಗಳಿದ್ದು, 4716 ಜನ ಬಿಡುಗಡೆ ಹೊಂದಿದ್ದಾರೆ. ಇಲ್ಲಯವರೆಗೆ 212579 ಸ್ಯಾಂಪಲ್‍ಗಳನ್ನು ಪರಿಕ್ಷಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.