ನಿಮ್ಮ ಸುದ್ದಿ ಬಾಗಲಕೋಟೆ
ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಅಮೀನಗಡ ಪಟ್ಟಣದಲ್ಲಿ ದೇವಾಂಗ ಸಮಾಜ ಬಾಂಧವರು ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.
ಪಟ್ಟಣದ ದೇವಾಂಗ ಸಮಾಜದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ದೇವಾಂಗ ಸಮಾಜದ ಬನಶಂಕರಿ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಆಗಮಿಸಿದ ಸಮಾಜದ ನೂರಾರು ಬಾಂಧವರು ಸಿಎಂಗೆ ಉಪತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಿದರು.
ಸಮಾಜದ ಮುಖಂಡ ಅಶೋಕ ಹುಣಶ್ಯಾಳ ಮಾತನಾಡಿ, ರಾಜ್ಯದಲ್ಲಿ ೩೦ ಲಕ್ಷಕ್ಕಿಂತಲೂ ಅಧಿಕ ದೇವಾಂಗ ಜನಾಂಗದವರಿದ್ದು ಆರ್ಥಿಕವಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತೀರಾ ಹಿಂದುಳಿದಿದೆ. ಈ ಹಿಂದೆ ಡಿ.ದೇವರಾಜು ಅರಸುರವರ ಕಾಲದಲ್ಲಿ ದೇವಾಂಗ ಸಮಾಜವನ್ನು ೨ಎ ವರ್ಗಕ್ಕೆ ಸೇರಿಸಿ, ಹಲವು ಸೌಲಭ್ಯ ನೀಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸಿ ೫೦೦ ಕೋಟಿ ರೂ. ಅನುದಾನ ನೀಡಬೇಕು, ಮಹಾರಾಷ್ಟçದಂತೆ ಇಲ್ಲಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೇ.೨ರಷ್ಟು ಮೀಸಲಾತಿ ಒದಗಿಸಬೇಕು. ಕೈಮಗ್ಗ ವೃತ್ತಿನಿರತ ಕುಟುಂಬಗಳಿಗೆ ೧೦೦ ಯೂನಿಟ್ ಉಚಿತ ವಿದ್ಯುತ್, ದೇವಲ ಮಹರ್ಷಿ ಜಯಂತಿಯನ್ನು ಸರಕಾರಿ ರಜೆಯೊಂದಿಗೆ ಆಯೋಜಿಸುವುದು, ಬನಶಂಕರಿಯಲ್ಲಿ ಬನಶಂಕರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿ ಅಗತ್ಯ ಅನುದಾನ ಮೀಸಲಿಡಬೇಕು. ಗಾಯತ್ರಿ ಪೀಠ ಹೇಮಕೂಟ ಹಂಪೆ ಇದರ ಸಮಗ್ರ ಅಭಿವೃದ್ಧಿಗೆ ಅಗತ್ಯ ಅನುದಾನವನ್ನು ಮಿಸಲಿರಿಸಿ ಅಭಿವೃದ್ಧಿಪಡಿಸುವುದು. ರಾಜ್ಯದ ಪ್ರತಿ ವಿವಿಯಲ್ಲಿ ದೇವರ ದಾಸಿಮಯ್ಯನವರ ಅಧ್ಯಾಯನ ಪೀಠ ಸ್ಥಾಪಿಸಬೇಕು. ಕೊರೊನಾ ಮತ್ತು ಪ್ರವಾಹದಿಂದ ಸಂಕಷ್ಟಕ್ಕೀಡಾದ ದೇವಾಂಗ ನೇಕಾರರ ಪುನರ್ವಸತಿಗಾಗಿ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚಿದಾನಂದ ದೂಪದ, ಪಪಂ ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಸದಸ್ಯ ಸಂಗಮೇಶ ಗೌಡರ, ವಿಠ್ಠಲ ಮೇಡಿ, ಸಂಗಪ್ಪ ಗೌಡರ, ಎಸ್.ಎನ್.ಗೌಡರ, ಅಶೋಕ ಬೆಲ್ಲದ, ರಾಘವೇಂದ್ರ ಗೌಡರ, ಲಕ್ಷ್ಮಣ ಹುಣಶ್ಯಾಳ, ಮುಸಂಗಪ್ಪ ಬೆಲ್ಲದ, ಪುಲಿಕೇಶಿ ಬೆಲ್ಲದ, ಶಂಕರ ಮೇಟಿ, ಸಂಗಪ್ಪ ಶಿನ್ನೂರ, ಶಂಕ್ರಪ್ಪ ಶಿನ್ನೂರ, ವಿಷ್ಣು ಗೌಡರ, ಸುನೀಲ ಗೌಡರ ಸೇರಿದಂತೆ ಇತರರು ಇದ್ದರು.