ನಿಮ್ಮ ಸುದ್ದಿ ಬಾಗಲಕೋಟೆ
ಮಾರ್ಚ್ ತಿಂಗಳಾಂತ್ಯದೊಳಗೆ ಜಿಲ್ಲಾ ಕಾಂಗ್ರೆಸ್ ಭವನ ಉದ್ಘಾಟನೆಗೆ ಚಿಂತಿಸಲಾಗಿದ್ದು ಪಕ್ಷದ ಮುಖಂಡರನ್ನು ಭೇಟಿ ಮಾಡಿ ದಿನಾಂಕ ಗೊತ್ತುಪಡಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಎಸ್‌ಪಿಆರ್ ಕಚೇರಿಯಲ್ಲಿ ಭವನಕ್ಕೆ ದೇಣಿಗೆ ಸ್ವೀಕರಿಸಿ ಅವರು ಮಾತನಾಡಿದರು. ಎಸ್‌ಪಿಆರ್‌ನ ಪೀರಾ ಖಾದ್ರಿ ೩೦ ಸಾವಿರ ಹಾಗೂ ಗ್ರಾಪಂನ ಮಾಜಿ ಅಧ್ಯಕ್ಷ ಜಗದೀಶ ಬಿಸಲದಿನ್ನಿ ೨೦ ಸಾವಿರ ರೂ. ದೇಣಿಗೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ಅಂದಾಜು ೭೫-೮೦ ಲಕ್ಷ ರೂ. ವೆಚ್ಚದ ಭವನ ನಿರ್ಮಾಣಕ್ಕೆ ಈಗಾಗಲೇ ದಾನಿಗಳಿಂದ ೩೧.೫೦ ಲಕ್ಷ ರೂ. ಸಂಗ್ರಹಗೊಂಡಿದೆ. ಮೊದಲ ಹಂತದಲ್ಲಿ ೪ ಕೋಣೆಗಳು ಪೂರ್ಣಗೊಂಡಿವೆ. ಅದರಲ್ಲಿ ೨೫೦ ಜನ ಕುಳಿತುಕೊಳ್ಳುವ ದೊಡ್ಡ ಭವನ, ಪ್ರತ್ಯೇಕ ಶೌಚಾಲಯ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಿದ್ಧವಾಗಿದೆ ಎಂದರು.
ಮೇಲ್ಚಾವಣಿಯಲ್ಲಿ ಹೊರಗಿನಿಂದ ಬರುವವರಿಗೆ ಅತಿಥಿ ಗೃಹ, ಪಕ್ಷದ ಹಿರಿಯರು ಸಭೆ ನಡೆಸಲು ಅಂದಾಜು ೩೦ ಜನ ಕುಳಿತುಕೊಳ್ಳಲು ಆಸನದ ವ್ಯವಸ್ಥೆಯ ಕೋಣೆ ಸಿದ್ದವಾಗಬೇಕಾಗಿದೆ. ಕಟ್ಟಡ ಆರಂಭದಿಂದ ವಿಳಂಬವಾಗದಂತೆ ನಿರ್ಮಾಣ ಕಾಮಗಾರಿ ನಿರಂತರವಾಗಿ ಸಾಗಿದ್ದು ಶೀಘ್ರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಭವನ ಉದ್ಘಾಟನೆಗೆ ಆಹ್ವಾನಿಸಲಾಗುವುದು ಎಂದು ಹೇಳಿದರು.
ಪೀರಾ ಖಾದ್ರಿ, ಜಗದೀಶ ಬಿಸಲದಿನ್ನಿ, ಪಪಂ ಸದಸ್ಯ ಬಿ.ಎಸ್.ನಿಡಗುಂದಿ, ಅಜ್ಮೀರ ಮುಲ್ಲಾ, ವಿಷ್ಣು ಗೌಡರ, ನಿಜಾಮುದ್ದೀನ್ ಖಾದ್ರಿ ಇತರರು ಇದ್ದರು.
ಜಾಲತಾಣ ನಿರ್ವಹಣೆಗೆ ಪ್ರತ್ಯೇಕ ಕೋಣೆ
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ವಿನೂತನ ತಂತ್ರಜ್ಞಾನಕ್ಕೆ ಅಳವಡಿಕೆ ಹಿನ್ನಲೆಯಲ್ಲಿ ಒಂದು ಪ್ರತ್ಯೇಕ ಸಾಮಾಜಿಕ ಜಾಲತಾಣ ನಿರ್ವಹಣೆಗಾಗಿ ಕೋಣೆ ನಿರ್ಮಿಸಲಾಗುವುದು.
ಕಾಶಪ್ಪನವರ ಕುಟುಂಬದಿಂದ ದೇಣಿಗೆ
ಸದ್ಯ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರು ಮೀಸಲಾತಿ ಹೋರಾಟಕ್ಕಾಗಿ ಬೆಂಗಳೂರಿನಲ್ಲಿದ್ದು ಅವರು ಬಂದ ತಕ್ಷಣ ಭೇಟಿ ಮಾಡಿ ಪಕ್ಷದ ಭವನ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲಾಗುವುದು. ಈಗಾಗಲೆ ದೇಣಿಗೆ ಕುರಿತು ಅವರೊಂದಿಗೆ ಮಾತನಾಡಿದ್ದೇನೆ ಎಂದು ಎಸ್.ಜಿ.ನಂಜಯ್ಯನಮಠ ತಿಳಿಸಿದರು.