ಮಾದರಿ ಗ್ರಾಪಂ ಆಗಿ ಪರಿವರ್ತಿಸೋಣ:ರಮೇಶ ಚಿತ್ತರಗಿ
ನಿಮ್ಮ ಸುದ್ದಿ ಬಾಗಲಕೋಟೆ
ಜನತೆ ನೀಡಿದ ಮತಕ್ಕೆ ಚ್ಯುತಿ ಬರದಂತೆ ಆಡಳಿತ ನಡೆಸಿ ೫ ವರ್ಷದೊಳಗೆ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿ ಆಗಿ ಪರಿವರ್ತಿಸೋಣ ಎಂದು ಗ್ರಾಪಂ ಸದಸ್ಯ ರಮೇಶ ಚಿತ್ತರಗಿ ಹೇಳಿದರು.
ಬಾಗಲಕೋಟೆ ಮತಕ್ಷೇತ್ರದ ಹಿರೇಮಾಗಿ ಗ್ರಾಪಂನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರು ನಮ್ಮ ಮೇಲೆ ವಿಶ್ವಾಸವಿಟ್ಟು ಸದಸ್ಯರನ್ನಾಗಿಸಿದ್ದಾರೆ. ಈಗಾಗಲೆ ಆಯ್ಕೆ ಆದ ಎರಡೂವರೆ ತಿಂಗಳಲ್ಲಿ ಗ್ರಾಮದ ವಿದ್ಯುತ್, ಚರಂಡಿ, ರಸ್ತೆ, ಶಾಲೆ ಅಭಿವೃದ್ಧಿ ಸೇರಿದಂತೆ ಹಲವು ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಪರಸ್ಪರ ಸಲಹೆ, ಸೂಚನೆ ಮೇರೆಗೆ ಎಲ್ಲರೂ ಕೂಡಿಕೊಂಡು ಕಾರ್ಯ ನಿರ್ವಹಿಸೋಣ. ಬೇರೆ ಗ್ರಾಮ ಪಂಚಾಯಿತಿ ಮಾದರಿ ಆಗಿದೆ ಎಂದು ಕೇಳುವ ಬದಲು ನಮ್ಮ ಗ್ರಾಮ ಪಂಚಾಯಿತಿಯೇ ಕೇಂದ್ರ ಹಾಗೂ ರಾಜ್ಯದಲ್ಲಿ ಮಾದರಿ ಗ್ರಾಮ ಪಂಚಾಯಿತಿ ಆಗುವಂತೆ ಒಗ್ಗಟ್ಟಾಗಿ ಕೆಲಸ ಮಾಡೋಣ. ಸರಕಾರದ ಯಾವುದೇ ಯೋಜನೆಗಳೆ ಬರಲಿ, ಅವುಗಳ ಸದುಪಯೋಗ ಪಡಿಸಿಕೊಂಡು ಗ್ರಾಮ ಹಾಗೂ ಗ್ರಾಮಸ್ಥರಿಗೆ ತಲುಪಿಸೋಣ. ಆ ಮೂಲಕ ಎಲ್ಲರಿಗೂ ಮಾದರಿ ಆಗಿ ಮುನ್ನಡೆಯೋಣ ಎಂದು ಹೇಳಿದರು.
ಸದಸ್ಯ ರಮೇಶ ದೊಡಮನಿ ಮಾತನಾಡಿ, ಗ್ರಾಮದಿಂದ ಅಂದಾಜು ೭೦ ವಿದ್ಯಾರ್ಥಿಗಳು ಪಪೂ ಕಾಲೇಜ್ ಹಾಗೂ ಪದವಿ ಕಾಲೇಜ್‌ಗಳಿಗೆ ತೆರಳುತ್ತಾರೆ. ಆದರೆ ಗ್ರಾಮದಿಂದ ಅಮೀನಗಡಕ್ಕೆ ಬಸ್ ಸೌಲಭ್ಯ ಇರದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಬಹುತೇಕ ಬಾರಿ ನಡೆದುಕೊಂಡೇ ಬರುತ್ತಿದ್ದು ಅವರ ವೇದನೆ ನೋಡಲಾರದಂತಾಗಿದೆ. ಬಸ್ ಸೌಲಭ್ಯ ಒದಗಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಅರ್ಜಿ ನೀಡಿದ್ದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ಕೂಡಲೆ ಎಲ್ಲ ಸದಸ್ಯರು ಸೇರಿ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಮತ್ತೊಮ್ಮೆ ಭೇಟಿ ಮಾಡೋಣ. ನಮ್ಮ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸದಿದ್ದರೆ ವಿದ್ಯಾರ್ಥಿಗಳೊಂದಿಗೆ ಸೇರಿ ಕಬ್ಬಿಣಖನಿ ರಸ್ತೆಯಲ್ಲಿ ಪ್ರತಿಭಟನೆಗಿಳಿಯೋಣ ಎಂದರು. ಸದಸ್ಯರ ಮಾತಿಗೆ ಅಧಿಕಾರಿಗಳು ಸೇರಿದಂತೆ ಎಲ್ಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ನೀರು ಪೂರೈಕೆಯ ವಿದ್ಯುತ್ ಪರಿಕರಗಳು ಕಳ್ಳತನವಾಗಿದ್ದರೂ ಪಿಡಿಒ ಠಾಣೆಯಲ್ಲಿ ದೂರು ದಾಖಲಿಸಿಲ್ಲ, ಒಂದು ತಿಂಗಳಾದರೂ ಸದಸ್ಯರ ಗಮನಕ್ಕೆ ತಂದಿಲ್ಲ. ಕೂಡಲೆ ದೂರು ದಾಖಲಿಸಿ, ಪೊಲೀಸರು ತಮ್ಮ ಕರ್ತವ್ಯ ಮಾಡುತ್ತಾರೆ. ದೂರು ದಾಖಲಿಸದೆ ಹಾಗೆ ಇದ್ದರೆ ಮುಂದಿನ ಹಂತದಲ್ಲಿ ಮತ್ತಷ್ಟು ಕಳ್ಳತನ ಪ್ರಕರಣದ ಹೆಚ್ಚಾಗುತ್ತವೆ ಎಂದು ಸದಸ್ಯ ರಮೇಶ ಚಿತ್ತರಗಿ ಒತ್ತಾಯಿಸಿದರು.
ಪಿಡಿಒ ಎಸ್.ಸಿ.ಹಿರೇಮಠ ಮಾತನಾಡಿ, ಬಸ್ ಸೌಲಭ್ಯಕ್ಕಾಗಿ ಎಲ್ಲರೂ ಸೇರಿ ಸಾರಿಗೆ ಅಧಿಕಾರಿಗಳನ್ನು ಮತ್ತೊಮ್ಮೆ ಭೇಟಿ ಮಾಡೋಣ. ವಿದ್ಯುತ್ ಪರಿಕರ ಕಳ್ಳತನಕ್ಕೆ ಸಂಬಂಧಿಸಿದಂತೆ ಅಮೀನಗಡ ಠಾಣೆಗೆ ದೂರು ದಾಖಲಿಸಲು ತೆರಳಿದಾದ ಸಂಶಯ ಬಂದ ವ್ಯಕ್ತಿ ಇದ್ದರೆ ದೂರು ಕೊಡಿ ಎಂದರು. ಸದ್ಯ ಮತ್ತೊಮ್ಮೆ ದೂರು ನೀಡುತ್ತೇನೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಸುರೇಶ ರಾಠೋಡ ಮಾತನಾಡಿದರು. ಉಪಾಧ್ಯಕ್ಷೆ ರೇಣವ್ವ ಆಸಂಗಿ, ಸದಸ್ಯರಾದ ರಮೇಶ ದೊಡಮನಿ, ಭೀಮವ್ವ ತಳವಾರ, ಮೈಲಾರಪ್ಪ ವಾಲೀಕಾರ, ಕೂಬವ್ವ ಚೌವಾಣ, ಭೀಮಪ್ಪ ಮಾದರ, ಸರೋಜಾ ಗೌಡರ, ಮುತ್ತಪ್ಪ ಹುನಗುಂದ, ಬಸಮ್ಮ ಪೂಜಾರಿ ಹಾಗೂ ಸಿಬ್ಬಂದಿ ಇದ್ದರು.