ನಿಮ್ಮ ಸುದ್ದಿ ಬಾಗಲಕೋಟೆ
ದೇಶದ ಅರ್ಹ ಎಲ್ಲರಿಗೂ ಕೇಂದ್ರ ಸರಕಾರ ಉಚಿತವಾಗಿ ಕೊರೊನಾ ನಿರೋಧಕ ಲಸಿಕೆ ನೀಡುತ್ತಿದ್ದು ಲಸಿಕೆ ಹಾಕಿಕೊಳ್ಳುವ ಮೂಲಕ ಕೊರೊನಾ ಹೋಗಲಾಡಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಪಪಂ ಸ್ಥಾಯಿ ಸಮಿತಿ ಸಭಾಪತಿ ವಿಜಯಕುಮಾರ ಕನ್ನೂರ ತಿಳಿಸಿದರು.
ಜಿಲ್ಲೆಯ ಅಮೀನಗಡ ಪಟ್ಟಣದ ವಾರ್ಡ್ ನಂ.೨ರಲ್ಲಿ ಮಾರುತೇಶ್ವರ ದೇವಸ್ಥಾನದಲ್ಲಿ ಪಪಂ ಸದಸ್ಯರ ಮುತುವರ್ಜಿ ನಡೆದ ಲಸಿಕೆ ಅಭಿಯಾನದಲ್ಲಿ ಅವರು ಮಾತನಾಡಿದರು.
ಪಟ್ಟಣದ ಎಲ್ಲ ಜನರಿಗೂ ಶೀಘ್ರ ಲಸಿಕೆ ದೊರೆಯಲೆಂದು ತಹಸೀಲ್ದಾರ್ ಶ್ವೇತಾ ಬಿಡಿಕರ್ ಅವರು ವಿಶೇಷ ಕಾಳಜಿಯಿಂದ ಲಸಿಕೆ ಅಭಿಯಾನ ಹಮ್ಮಿಕೊಳ್ಳುವಂತೆ ಸೂಚಿಸಿದ್ದರು. ಅದರಂತೆ ಕೋವಿಡ್ ತಡೆ ನಿಟ್ಟಿನಲ್ಲಿ ಜನರ ಮನೆ ಬಾಗಿಲಿಗೆ ಲಸಿಕೆ ನೀಡುವ ಉದ್ದೇಶದಿಂದ ಈ ಲಸಿಕೆ ಅಭಿಯಾನ ನಡೆಸಲಾಯಿತು ಎಂದರು.
ವಾರ್ಡ್ ಯುವ ಮುಖಂಡ ರಾಘವೇಂದ್ರ ಗೌಡರ ಮಾತನಾಡಿ, ಪಪಂ ಆಡಳಿತ ತರಾತುರಿಯಲ್ಲಿ ಮುಂದಾಲೋಚನೆಯಿಲ್ಲದೆ ಜೂ.೯ರಿಂದ ಲಸಿಕೆ ಅಭಿಯಾನ ಎಂದು ಹೇಳಿದ್ದರೂ ಅಂದು ಆರಂಭವಾಗಲಿಲ್ಲ. ಹೀಗಾಗಿ ಪಪಂ ಸದಸ್ಯರಾದ ಗುರುನಾಥ ಚಳ್ಳಮರ, ವಿಜಯಕುಮಾರ ಕನ್ನೂರ ಸೇರಿದಂತೆ ಇತರರ ಸಹಾಯದೊಂದಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಂಪರ್ಕಿಸಿ ಜನರಿಗೆ ಲಸಿಕೆ ವ್ಯವಸ್ಥೆ ಮಾಡಲಾಯಿತು ಎಂದು ಹೇಳಿದರು.
ಅಭಿಯಾನದಲ್ಲಿ ಪಪಂ ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಕಂದಾಯ ನಿರೀಕ್ಷಕ ಜಂಬುನಾಥ ಚಿನಿವಾಲರ, ಗ್ರಾಮಲೆಕ್ಕಿಗ ಸುರೇಶ ಹುದ್ದಾರ, ವೈದ್ಯಾಧಿಕಾರಿ ಡಾ.ರೂಪಾ, ಆರೋಗ್ಯ ಸಹಾಯಕ ಪ್ರಸನ್ನ ಜಮಖಂಡಿ, ಮಂಜುನಾಥ ಬಂಡಿ, ಸಿದ್ದು ಸಜ್ಜನ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.