ನಿಮ್ಮ ಸುದ್ದಿ ಬಾಗಲಕೋಟೆ
ಕಾಂಗ್ರೆಸ್ ಪಕ್ಷದ ಮುಖಂಡರಿಂದ ಮುಂದುವರೆದ ಪಾಕಿಸ್ತಾನದ ಪರ ಹೇಳಿಕೆಯನ್ನು ಬಿಜೆಪಿ ಜಿಲ್ಲಾ ಘಟಕ ಖಂಡಿಸಿದೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯಸಿಂಗ್ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಂಬ ಹಗಲುಗನಸಿನಲ್ಲಿ ಜಮ್ಮು ಕಾಶ್ಮೀರಕ್ಕೆ ೩೭೦ನೇ ವಿಧಿಯಡಿ ಮತ್ತೆ ವಿಶೇಷ ಸ್ಥಾನಮಾನ ಕಲ್ಪಿಸುವ ದೇಶದ್ರೋಹದ ಮಾತುಗಳನ್ನಾಡಿದ್ದು ಇದು ಕಾಂಗ್ರೆಸ್‌ನ ಟೂಲ್‌ಕಿಟ್‌ನ ಮುಂದುವರೆದ ಭಾಗ ಎಂದರೆ ತಪ್ಪಾಗಲಿಕ್ಕಿಲ್ಲ. ಈ ಹೇಳಿಕೆ ಗಮನಿಸಿದರೆ ಇವರು ಚೀನಾ, ಪಾಕಿಸ್ತಾನದ ಏಜೆಂಟರಂತೆ ವರ್ತಿಸುತ್ತಿರುವದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಶಕದ ದುಷ್ಟ ಚರಿತ್ರೆ ತೊಲಗಿಸಿ ಅಭಿವೃದ್ಧಿಪರ, ದಲಿತಪರ, ನಾಗರಿಕ ಸಮಾಜದ ಬದುಕನ್ನು ನಿರ್ಮಾಣ ಮಾಡುವಂತಹ ಐತಿಹಾಸಿಕ ಕ್ರಮವನ್ನು ಕಾಂಗ್ರೆಸ್ಸಿಗರು ವಿರೋಧಿಸುತ್ತಿರುವುದು, ಅವರು ಎಂದೆಂದೂ ದೇಶದ ಪ್ರಗತಿ ಬಯಸುತ್ತಿಲ್ಲ ಎಂಬ ಬಿಜೆಪಿ ಹೇಳಿಕೆಗೆ ಸಾಕ್ಷಿ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ವಿಭಾಗ ಸಹಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಅವರು ಕಾಂಗ್ರೆಸ್ ನಾಯಕರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಪ್ರಧಾನಿಯವರ ಘನತೆಗೆ ಧಕ್ಕೆ ತರುವುದರೊಂದಿಗೆ ದೇಶದ ಮಾನವನ್ನು ಕಾಂಗ್ರೆಸ್ ಪಕ್ಷ ಹರಾಜು ಹಾಕುವ ನಿರಂತರ ಪ್ರಕ್ರಿಯೆ ಮುಂದುವರಿಸಿರುವುದು ಖಂಡನೀಯ.
ದಿಗ್ವಿಜಯಸಿಂಗ್ ಕ್ಲಬ್‌ಹೌಸ್ ಆಪ್ ಮೂಲಕ ವಿದೇಶಿ ಮಾಧ್ಯಮದ ಪ್ರತಿನಿಧಿಯೊಂದಿಗೆ ಸಂದರ್ಶನದಲ್ಲಿ ನರೇಂದ್ರ ಮೋದಿ ಅಧಿಕಾರ ಕಳೆದುಕೊಂಡರೆ ಎಂಬ ಉಹಾತ್ಮಕ ಪ್ರಶ್ನೆಗೆ ಅವರು ಈ ರೀತಿಯ ಉತ್ತರ ನೀಡಿರುವುದು ಕಾಂಗ್ರೆಸ್ ಪಕ್ಷ ಪಾಕ್ ಹಾಗೂ ಚೀನಾ ಪರ ಒಲವಿನ ನೀತಿಯ ಪ್ರತಿಬಿಂಬದಂತಿದೆ.
ಕಾಂಗ್ರೆಸ್ಸಿಗರಿಗೆ ಜಮ್ಮು ಕಾಶ್ಮೀರ ಶಾಂತವಾಗಿರುವುದು ಬೇಡವಾಗಿದೆ. ಬಹುಶ: ಕಾಂಗ್ರೆಸ್ ನಾಯಕರು ತಾವೇ ಈ ಪ್ರಶ್ನೆ ಪ್ಲಾಂಟ್ ಮಾಡಿ ಉತ್ತರ ಹೇಳಿದಂತಿದೆ. ೨೦೧೪ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಮೋದಿಯವರನ್ನು ಕೆಳಗಿಳಿಸಲು ಪಾಕಿಸ್ತಾನದ ಸಹಕಾರ ಕೋರಿ ಇನ್ನೊಬ್ಬ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನದ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ರಾಹುಲ್ ಗಾಂಧಿ ಸಹ ೩೭೦ನೇ ವಿಧಿಯ ರದ್ದತಿ ಬಹುದೊಡ್ಡ ಪ್ರಮಾದ ಎಂದು ಟ್ವೀಟ್ ಮಾಡಿದ್ದರು. ೨೦೧೯ರ ಅಗಸ್ಟ್ನಲ್ಲಿ ರಾಹುಲ್‌ರವರ ಟ್ವಿಟ್‌ನ್ನು ಆಧಾರಮಾಡಿಕೊಂಡು ಪಾಕಿಸ್ತಾನದ ಪ್ರಧಾನಿ ಈ ಕುರಿತು ವಿಶ್ವಸಂಸ್ಥೆಗೆ ಪತ್ರ ಬರೆದಿದ್ದರು. ಇದು ಕಾಂಗ್ರೆಸ್‌ನವರ ಪಾಕಿಸ್ತಾನಿ ಪರ ಚಿಂತನೆ ಅಲ್ಲದೆ ಇನ್ನೇನು?. ಹೀಗೆ ಹಲವರು ಪಾಕಿಸ್ತಾನ ಪರ ಹೇಳಿಕೆ ನೀಡುತ್ತಿದ್ದು ಕೂಡಲೆ ಆ ಪಕ್ಷದ ನೇತಾರರು ತಮ್ಮ ಹೇಳಿಕೆಯನ್ನು ಹಿಂಪಡೆದು ದೇಶದ ಕ್ಷಮೆ ಕೋರಬೇಕೆಂದು ಬಿಜೆಪಿ ಮಾಧ್ಯಮ ಸಂಚಾಲಕ ನರೇಂದ್ರ ಕುಪ್ಪಸ್ತ ಆಗ್ರಹಿಸಿದ್ದಾರೆ.