ಪ್ರವಾಹ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ : ಡಿಸಿಎಂ ಕಾರಜೋಳ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿದಲ್ಲಿ ನಿಯಂತ್ರಣಕ್ಕೆ ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳಲುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಪ್ರವಾಹ ನಿಯಂತ್ರಣ ಹಾಗೂ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರವಾಹ ಉಂಟಾದ ಸಂದರ್ಭದಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು. ಜಿಲ್ಲೆಯಲ್ಲಿ 188 ಗ್ರಾಮಗಳು ಪ್ರವಾಹದಿಂದ ಬಾಧಿತಗೊಳ್ಳುತ್ತಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದ ಜೊತೆಗೆ ಕಾಳಜಿ ಕೇಂದ್ರದ ಮೂಲಕ ಊಟ ಮತ್ತು ಉಪಚಾರದ ವ್ಯವಸ್ಥೆಗೆ ಸಿದ್ದತೆ ಮಾಡಿಕೊಳ್ಳಲು ತಿಳಿಸಿದರು.
ಜಾನುವಾರುಗಳನ್ನು ಸಹ ಸುರಕ್ಷಿತ ಸ್ಥಳಕ್ಕೆ ಸೇರಿಸುವ ಕೆಲಸ ಹಾಗೂ ಮೇವು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಹೆಸ್ಕಾಂದವರು ಟಿಸಿ, ಕಂಡಕ್ಟರ ಸೇರಿದಂತೆ ಇತರೆ ಸಲಕರಣಗಳನ್ನು ಸಂಗ್ರಹಿಸಿ ಇಟ್ಟುಕೊಂಡು ಪ್ರವಾಹ ಸಂದರ್ಭದಲ್ಲಿ ರೈತರಿಗೆ, ಜನವಸತಿಗಳಿಗೆ ವಿದ್ಯುತ್ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಲು ತಿಳಿಸಿದರು. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪ್ರವಾಹ ಮತ್ತು ಕೋವಿಡ್ ನಿಯಂತ್ರಣ ಹಿನ್ನಲೆಯ ಅಧಿಕಾರಿಗಳು ದಿನ 24 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸಲಿಕಾಕರಣ ಕಾರ್ಯ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು. ವಿಶೇಷ ಅಭಿಯಾನದ ಮೂಲಕ ಎಲ್ಲರಿಗೂ ಲಸಿಕೆ ನೀಡುವ ಕಾರ್ಯವಾಗಬೇಕು. ಈಗಾಗಲೇ ಲಸಿಕೆ ವಿತರಿಸದ ಬಗ್ಗೆ ಮಾಹಿತಿ ಪಡೆದ ಉಪ ಮುಖ್ಯಮಂತ್ರಿಗಳು ಜಿಲ್ಲೆಗೆ ಬೇಕಾದ ಅಗತ್ಯ ಲಸಿಕೆ ಅಭಾವವಾಗದಂತೆ ನೋಡಿಕೊಳ್ಳಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ 12490 ಕೋವಿಶಿಲ್ಡ ಮತ್ತು 10820 ಕೋವಾಕ್ಸಿನ್ ಸೇರಿ ಒಟ್ಟು 23310 ಡೋಜ್ ವಾಕ್ಸಿನ್ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ತಿಳಿಸಿದರು.
ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಪ್ರವಾಹ ಉಂಟಾದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ವಿವರವಾಗಿ ತಿಳಿಸಿದರು. ಪ್ರವಾಹ ಪೀಡಿತ ಗ್ರಾಮಗಳಿಗೆ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಪ್ರತಿ ತಾಲೂಕು ಹಾಗೂ ಉಪವಿಭಾಗ ಮಟ್ಟದಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದಿನ 24 ಗಂಟೆಗಳ ತುರ್ತು ಸಹಾಯವಾಣಿ ಪ್ರಾರಂಭಿಸಲಾಗಿದೆ.
ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿ, ನಾಲಾಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗುತ್ತಿದೆ. ನುರಿತ ಈಜುಗಾರರು, ಹಾವು ಹಿಡಿಯುವವರು ಹಾಗೂ ಸ್ವಯಂ ಸೇವಕರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವಿಜಯ ಕಂಠಿ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕೋವಿಡ್ 3ನೇ ಅಲೆ : ಹೆಚ್ಚಿನ ನಿಗಾ
ಸಂಭವನೀಯ ಕೋವಿಡ್ 3ನೇ ಅಲೆ ನೆರೆಯ ಮಹಾರಾಷ್ಟ್ರ, ಹೈದಾರಾಬಾದ್, ಗೋವಾ ಸೇರಿದಂತೆ ಇತರೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಜಿಲ್ಲೆಗೆ ಆಗಮಿಸುವವರ ಮೇಲೆ ಕೋವಿಡ್ ತಪಾಸಣೆ, ಕೋವಿಡ್ ಲಸಿಕೆ ಹಾಕಿಸಿಕೊಂಡ ಬಗ್ಗೆ ತಪಾಸಣೆ ಕೈಗೊಳ್ಳಲು ಕ್ರಮವಹಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರಗೆ ಡಿಸಿಎಂ ಸೂಚಿಸಿದರು.