ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟಿಸಿದ ಮತದಾರರ ಪಟ್ಟಿಯಲ್ಲಿ ಲೋಪದೋಷ ಮುಂದುವರೆದಿದ್ದು ಪಟ್ಟಿ ಪರಿಶೀಲಿಸಿ ನ್ಯಾಯಸಮ್ಮತ ಚುನಾವಣೆ ನಡೆಸಲು ಅಧಿಕಾರಿಗಳು ಅವಕಾಶ ಕಲ್ಪಿಸಿಕೊಡಬೇಕೆಂದು ನಗರ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ವೈ.ಎಸ್.ಬಂಡಿವಡ್ಡರ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಗೆ ಪತ್ರ ಬರೆದು ಆಗ್ರಹಿಸಿದ ಅವರು, ಮತದಾರರ ಕರಡು ಪಟ್ಟಿಯನ್ನು ಜೂ.೨೯ರಂದು ಪ್ರಕಟಿಸಿ ಜು.೧ರೊಳಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಅದರಂತೆ ಈಗಾಗಲೆ ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದರು.
ಪಟ್ಟಣದಲ್ಲಿ ೧ ರಿಂದ ೧೬ ವಾರ್ಡ್ಗಳಿದ್ದು, ಸದ್ಯದ ಕರಡು ಮತದಾರರ ಪಟ್ಟಿಯಲ್ಲಿ ಬೇರೆ ಬೇರೆ ವಾರ್ಡ್ಗಳ ಮತದಾರರನ್ನು ಸೇರ್ಪಡೆಗೊಳಿಸಲಾಗಿದೆ. ಯಾವುದೇ ಸ್ಥಾನಿಕ ವಿಚಾರಣೆ ಮಾಡದೆ ಸ್ಥಳೀಯ ಆಡಳಿತದ ಅಧಿಕಾರಿಗಳು ಮನಸೋ ಇಚ್ಚೇ ವರ್ತಿಸಿದ್ದು ಈ ಕುರಿತು ಈಗಾಗಲೆ ನಿಗಧಿತ ಅವಧಿಯಲ್ಲಿ ಆಕ್ಷೇಪಣೆ ಸಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
ನಂತರದಲ್ಲೂ ಸಹ ಆಕ್ಷೇಪಣೆ ಅರ್ಜಿಗೆ ಯಾವುದೇ ಬೆಲೆ ಇಲ್ಲದಂತೆ ತೋರುತ್ತಿದ್ದು ಆಕ್ಷೇಪಣೆ ಇತ್ಯರ್ಥ ಪಡಿಸುವ ವೇಳೆ ನೋಂದಾಯಿತ ರಾಜಕೀಯ ಮುಖಂಡರ ಸಭೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಅಂತಿಮ ಪಟ್ಟಿ ಸಿದ್ಧಪಡಿಸಿದ್ದಾರೆ ಎಂಬ ಮಾಹಿತಿ ಇದೆ. ಜತೆಗೆ ಜು.೯ರಂದು ಅಂತಿಮ ಮತದಾರರ ಪಟ್ಟಿ ಕಚೇರಿಯಲ್ಲಿ ಪ್ರಕಟಗೊಳ್ಳುತ್ತದೆ ಎನ್ನಲಾಗಿದ್ದು ಈವರೆಗೆ ಪ್ರಕಟಗೊಂಡಿಲ್ಲ ಎಂದು ದೂರಿದ್ದಾರೆ.
ಹೀಗಾಗಿ ಕೂಡಲೆ ಮೇಲಧಿಕಾರಿಗಳು ಸ್ಥಳೀಯ ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧವಾದ ಮತದಾರರ ಪಟ್ಟಿಯಲ್ಲಿನ ಲೋಪದೋಷ ಸರಿಪಡಿಸಿ ನ್ಯಾಯಸಮ್ಮತ ಚುನಾವಣೆ ನಡೆಯಲು ಅವಕಾಶ ಮಾಡಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.