ನಿಮ್ಮ ಸುದ್ದಿ ವಿಜಯಪುರ
ವಿಧಾನ ಪರಿಷತ್ ಚುನಾವಣೆಯಲ್ಲಿ ಕರ್ತವ್ಯ ಲೋಪ ಎಸಗಿದ ತಿಕೋಟಾ ತಾಲೂಕಿನ ಬಾಬಾನಗರ ಗ್ರಾಪಂ ಪಿಡಿಒ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಪಿ. ಸುನಿಲಕುಮಾರ ಆದೇಶ ಹೊರಡಿಸಿದ್ದಾರೆ.
ರೇಣುಕಾ ಸೊಲ್ಲಾಪುರ ಅಮಾನತಾದ ಪಿಡಿಒ. ಬಾಬಾನಗರ ಗ್ರಾಪಂ ಸದಸ್ಯೆ ಮುತ್ತವ್ವ ಗೌಡನವರ ಅನಕ್ಷರಸ್ಥರಿದ್ದಾರೆ ಎಂದು ಅಮಾನತಾದ ಪಿಡಿಓ ರೇಣುಕಾ ಸೊಲ್ಲಾಪುರ ಅವರು, ಡಿ. 7 ರಂದು ನೀಡಿದ ಪ್ರಮಾಣ ಪತ್ರದಲ್ಲಿ ದೃಢೀಕರಿಸಿದ್ದಾರೆ. ಅದೇ ಪಿಡಿಒ ಡಿ. 6 ರಂದು ಎಂಎಸ್ಜಿ ಅಂತಾ ಸಹಿ ಇರುವುದನ್ನು ದೃಢೀಕರಿಸಿದ್ದಾರೆ. ಹೀಗಾಗಿ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನ್ಯಾಯವಾದಿ ಎಸ್.ಎಸ್. ಮಿತ್ತಲಕೋಡ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ ವಿನಂತಿಸಿದ್ದರು.
ಅನಕ್ಷರಸ್ಥ ಮತದಾರರಿಗೆ ಮತ ಚಲಾಯಿಸುವ ವೇಳೆ ಸಹಾಯಕರನ್ನು ನೀಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಇದೇ ಕಾರಣಕ್ಕಾಗಿ ಪಿಡಿಒ ಸದಸ್ಯೆಗೆ ಒಂದು ಬಾರಿ ಅನಕ್ಷರಸ್ಥೆ ಎಂದು ಪ್ರಮಾಣ ಪತ್ರ ನೀಡಿದ್ದರೆ, ಇನ್ನೊಂದು ಬಾರಿ ಸದಸ್ಯೆಯ ಸಹಿಯೊಂದಿಗೆ ದೃಢೀಕರಿಸಿದ್ದಾರೆ. ಒಬ್ಬ ಸದಸ್ಯೆಗೆ ಸಂಬಂಧಿಸಿದಂತೆ ಎರಡು ದೃಢೀಕರಣ ಪ್ರಮಾಣ ಪತ್ರ ನೀಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದನ್ನು ಗಂಭೀರವಾಗಿ ಪರಿಗಣಿಸಿ, ಪಿಡಿಒ ವಿರುದ್ಧ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿದ್ದಾಗಿ ಜಿಲ್ಲಾಧಿಕಾರಿ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.