ಸನ್ಯಾಸ್ವತ ಬಿಟ್ಟು ರಾಜಕೀಯಕ್ಕೆ ಬರಲಿ
ಕೂಡಲಸಂಗಮ ಸ್ವಾಮೀಜಿಗೆ ಸಚಿವ ನಿರಾಣಿ ಸವಾಲು
ನಿಮ್ಮ ಸುದ್ದಿ ಬಾಗಲಕೋಟೆ
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಘೋಷಣೆ ತಪ್ಪಿಸುವಲ್ಲಿ ತಮ್ಮ ಪಾತ್ರ ಸಾಬೀತಾದರೆ ಇಂದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸ್ಪಷ್ಟಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಘೋಷಣೆಯಲ್ಲಿ ನಮ್ಮ ಸಮಾಜದ ಸಚಿವರೊಬ್ಬರಿಂದ ಘೋಷಣೆ ತಪ್ಪಿತು ಎಂಬ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಗೆ ಸಚಿವ ನಿರಾಣಿ ಗರಂ ಆಗಿ ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ರೀತಿಯಾಗಿ ಸ್ವಾಮೀಜಿಗೆ ಸವಾಲು ಹಾಕಿದರು.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲು ಘೊಷಣೆಯಲ್ಲಿ ನಾನೇನಾದರೂ ತಪ್ಪಿಸಿದ್ದು ಸಾಬೀತು ಮಾಡುವ ಸಾಕ್ಷಿ ಖಚಿತಪಡಿಸಿದರೆ ಇಂದೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಸಾಬೀತು ಮಾಡದಿದ್ದರೆ ಸ್ವಾಮೀಜಿಗಳು ಸನ್ಯಾಸತ್ವ ತ್ಯಜಿಸಿ ರಾಜಕಾಣಕ್ಕೆ ಬರಬೇಕು ಎಂದು ನೇರ ಸವಾಲು ಹಾಕಿದರು.
ಸ್ವಾಮೀಜಿಗಳು ತಾವು ಮನಸ್ಸು ಮಾಡಿದರೆ ಅವರನ್ನು ಸೋಲಿಸುತ್ತೇವೆ, ಇವರನ್ನು ಸೋಲಿಸುತ್ತೇವೆ ಎಂದು ಪ್ರತಿ ಬಾರಿ ಚುನಾವಣೆಯಲ್ಲಿ ಹೇಳುತ್ತಾರೆ. ಆದರೆ ೨೦೧೩ರ ಚುನಾವಣೆಯಲ್ಲಿ ನಿಮ್ಮ ಪೀಠ ಇರುವಲ್ಲೇ ನಿಮ್ಮ ಸಮಾಜದ ಶಾಸಕನನ್ನು ಗೆಲ್ಲಿಸುವುದು ಆಗಲಿಲ್ಲ. ನಿಮ್ಮ ಶಕ್ತಿ ಎಷ್ಟಿದೆ ಎಂಬುದು ಗೊತ್ತಾಗಿದೆ. ನಿಮ್ಮ ಕ್ಷೇತ್ರದ ಒಬ್ಬ ಎಂಪಿ ಅಭ್ಯರ್ಥಿಯನ್ನೂ ಗೆಲ್ಲಿಸಲು ಆಗಲಿಲ್ಲ. ಧಾರವಾಡದಲ್ಲಿ ವಿನಯ ಕುಲಕರ್ಣಿ ಅವರನ್ನು ಗೆಲ್ಲಿಸಲು ಹಗಲು ರಾತ್ರಿ ಓಡಾಡಿದ್ದರೂ ಫಲಿತಾಂಶ ಏನಾಯಿತು? ಪ್ರಕಾಶ ಹುಕ್ಕೇರಿ ಅವರ ಕ್ಷೇತ್ರದಲ್ಲಿ ಓಡಾಡಿದ್ದೀರಿ ಅಲ್ಲಿನ ಫಲಿತಾಂಶ ಏನಾಯಿತು ಎಂದು ಗರಂ ಆದ ನಿರಾಣಿ ಅವರು ಸ್ವಾಮೀಜಿಗಳೇ ನಾವು ಗೆಲ್ಲುವುದು, ಸೋಲುವುದು ಕ್ಷೇತ್ರದ ಮತದಾರರ ಕೈಯಲ್ಲಿದೆ ಎಂದು ಹರಿಹಾಯ್ದರು.
ಲಕ್ಷಾಂತರ ಜನ ಸಭೆಗೆ ಬಂದಿದ್ದಾರೆ ಎಂದು ಸಮಾಜಕ್ಕೆ ೨ಎ ಮೀಸಲು ಸಿಗಬೇಕೆಂದು ಬಂದಿದ್ದಾರೆಯೇ ಹೊರತು ನಿಮ್ಮ ಮಾತಿಗಲ್ಲ. ನಿಮ್ಮ ನಡತೆ ನಡವಳಿಕೆಗೆ ಅಲ್ಲ. ನಿಮ್ಮ ಬಾಯಿ ಚಪಲಕ್ಕೆ ಯಾರದೋ ಮಾತು ಕೇಳಿ ಮಾತನಾಡಬಾರದು. ನೀವು ದೊಡ್ಡ ಸ್ಥಾನದಲ್ಲಿದ್ದೀರಿ. ಮನಸ್ಸಿಗೆ ಬಂದಂತೆ ಮಾತನಾಡಿದರೆ ಒಬ್ಬರ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸಮಸ್ತ ವೀರಶೈವ ಲಿಂಗಾಯತ ಸಮಾಜಕ್ಕೆ ೨೯ರಂದು ಮೀಸಲಾತಿ ಸಿಗುತ್ತದೆ. ಆಗ ನಾವೇ ಬಂದು ನಿಮಗೆ ಸನ್ಮಾನ ಮಾಡುತ್ತೇವೆ ಎಂದು ಡಿ.೨೯ರಂದು ೨ಎ ಮೀಸಲು ದೊರೆಯುತ್ತದೆ ಎಂಬ ಸುಳಿವು ಬಿಟ್ಟುಕೊಟ್ಟರು.
ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ರಾಜ್ಯದಲ್ಲಿ ೮೦ ಲಕ್ಷ ಸಮಾಜದ ಜನ ಇರುವುದರಿಂದ ೨ ಪೀಠ ಮಾಡಿದ್ದೇವೆ. ಮೂರನೇ ಪೀಠವನ್ನೂ ಮಾಡಲಾಗಿದೆ. ಮುಂದೆ ೨ ಪೀಠಗಳು ತಯಾರಾಗುತ್ತದೆ. ೫ ಪೀಠಗಳು ಅಣ್ಣ ತಮ್ಮಂದಿರಂತೆ ಇರಲಿ ಎಂಬ ಉದ್ದೇಶವಿದೆ ಎಂದರು.
೨ಎ ಮೀಸಲಾತಿ ನೀಡದಿದ್ದರೆ ಬಾರಕೋಲ ಚಳುವಳಿ ಮಾಡುತ್ತೇವೆ ಎಂಬ ಕಾಶಪ್ಪನವರ ಹೇಳಿಕೆಗೆ, ನಿಮ್ಮ ತಂದೆಯವರೇ ಮಂತ್ರಿ ಆಗಿದ್ದರು. ಸಮಾಜದ ರಾಜ್ಯಾಧ್ಯಕ್ಷರೂ ಆಗಿದ್ದರು. ಆ ವೇಳೆಯಲ್ಲಿ ನೀನು ಯಾಕೆ ಮಾಡಲಿಲ್ಲ. ಆಗ ಸರಕಾರ ಇತ್ತು. ಮಂತ್ರಿನೂ ಇದ್ದರು. ಆವಾಗ ಎಲ್ಲಿತ್ತು ನಿಮ್ಮ ಬಾರಕೋಲು. ಮಾತನಾಡುವಾಗ ಆತ್ಮಾವಲೋಕನ ಮಾಡಿಕೊಂಡು ಮಾತನಾಡಬೇಕ. ನನ್ನನ್ನು ಸೋಲಿಸಿಯೇ ತೀರುತ್ತೇನೆ ಎಂದು ಸವಾಲು ಹಾಕಿದ್ದಾರೆ. ನಮ್ಮ ಸೋಲಿಸುವುದು ಗೆಲ್ಲಿಸುವುದು ನನ್ನ ಬೀಳಗಿ ಕ್ಷೇತ್ರದ ಜನತೆ ಇದ್ದಾರೆ. ಬೀಳಗಿ ಮತದಾರರ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ. ನಾನು ಮಂತ್ರಿ ಆಗಿದ್ದು ಪಕ್ಷದ ಹಿರಿಯರಿಂದ. ಎಂಎಲ್‌ಎ ಆಗಿದ್ದು ಬೀಳಗಿ ವಿಧಾನಸಭೆ ಮತದಾರರಿಂದ ಎಂದರು.
ನನ್ನನ್ನು ಸೋಲಿಸುವುದು ಮತದಾರರ ಕಡೆ ಇದೆ. ಬಾಯಿ ಚಪಲಕ್ಕೆ ಮಾತನಾಡುವವರ ಕೈಯಲ್ಲಿಲ್ಲ. ನೀನು ಕಾಂಗ್ರೆಸ್‌ನಲ್ಲಿದ್ದೀಯಾ. ನಾನು ಬಿಜೆಪಿಯಲ್ಲಿದ್ದೇನೆ. ಪಕ್ಷ ಎಂದು ಬಂದಾಗ ನೀನು ನನಗೆ ವಿರೋಧಿಯೇ. ನೀನು ನನ್ನನ್ನು ಸೋಲಿಸಬಹುದು. ನಾನು ನಿನ್ನನ್ನು ಸೋಲಿಸಬಹುದು. ಅದನ್ನು ನಾನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇನೆ. ಇಂತಹವರನ್ನೇ ವಿಧಾನಸೌಧದ ಮೂರನೇ ಮಹಡಿಯಲ್ಲಿ ನೋಡುತ್ತೇನೆ ಎಂದು ಹೇಳುತ್ತೀರಿ. ಕಡಿಮೆ ಅವಧಿಯಲ್ಲಿ ೩ನೇ ಫ್ಲೋರ್‌ನಲ್ಲಿ ಕೂಡುತ್ತಾರೆ ಎನ್ನುತ್ತೀಯಾ. ಹಾಗಾದರೆ ನೀನು ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರಿಗೆ ಹೇಳುವ ಸಂದೇಶವಾದರೂ ಏನು? ನೀನು ಮತ್ತೊಬ್ಬರನ್ನು ೩ನೇ ಫ್ಲೋರ್‌ಗೆ ಕೂರಿಸುವಷ್ಟು ಶಕ್ತಿವಂತನಾಗಿದ್ದರೆ ಇಷ್ಟು ದಿನ ನೀನು ಸುಮ್ಮನೆ ಕುಳಿತಿದ್ದಾದರೂ ಯಾಕೆ. ಮೊದಲು ನಿನ್ನ ಬಾಡಿ ಲ್ಯಾಂಗ್ವೇಜ್ ಬದಲಾಯಿಸು. ಎಲ್ಲ ಕಡೆಗೂ ಲೂಸ್ ಟಾಕ್ ಆಗಬಾದರು. ಮತದಾರರು ಪ್ರಜ್ಞಾವಂತರಿದ್ದು ಎಲ್ಲವನ್ನು ಗಮನಿಸುತ್ತಿದ್ದಾರೆ ಎಂದು ಕಾಶಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು.