2392 ಬಾಧಿತ ಕುಟುಂಬಗಳಿಗೆ ಪುನರ್ವಸತಿ
ನಿಮ್ಮ ಸುದ್ದಿ ಬಾಗಲಕೋಟೆ
ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಯುನಿಟ್-3ರಲ್ಲಿ 2735.66 ಕೋಟಿ ರೂ.ಗಳ ವೆಚ್ಚದ ಒಟ್ಟು 5 ಪ್ಯಾಕೇಜ್‍ಗಳ ಕಾಮಗಾರಿಗಳಿಗೆ ಶಾಸಕ ಡಾ.ವೀರಣ್ಣ ಚರಂತಿಮಠ ಭೂಮಿ ಪೂಜೆ ನೆರವೇರಿಸುವ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಬುಧವಾರ ಹಮ್ಮಿಕೊಂಡ ಯುನಿಟ್-3ರಲ್ಲಿ ಕೈಗೊಂಡ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಯುನಿಟ್-3ರಲ್ಲಿ 2392 ಸಂತ್ರಸ್ಥರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದ್ದು, ಇದಕ್ಕಾಗಿ 1643.38 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂಸ್ವಾಧೀನಕ್ಕಾಗಿ 221.61 ಕೋಟಿ ರೂ.ಗಳ ಪರಿಹಾರ ಸಹ ನೀಡಲಾಗಿದೆ. ಯುನಿಟ್-3ರಲ್ಲಿ 11 ಸೆಕ್ಟರಗಳನ್ನಾಗಿ ವಿಂಗಡಿಸಿ ಅಭಿವೃದ್ದಿಪಡಿಸಲಾಗುತ್ತಿದ್ದು, ಅದರಲ್ಲಿ ಒಟ್ಟು 22234 ನಿವೇಶನಗಳನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಜಿ.ಎಸ್.ಟಿ ಸೇರಿ ಒಟ್ಟು 2735.66 ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಯುನಿಟ್-3ರಲ್ಲಿ ಮೂಲ ಭೂತ ಸೌಕರ್ಯಗಳಾದ ನೀರು ಸರಬರಾಜು, ಒಳಚರಂಡಿ ಯೋಜನೆ, ವಿದ್ಯುತ್ತೀಕರಣ, ರಸ್ತೆ ಹಾಗೂ ಬದಿಚರಂಡಿ ಕಾಮಗಾರಿಗಳಿಗಾಗಿ 5 ಪ್ಯಾಕೇಜಗಳಲ್ಲಿ ಟೆಂಡರ್ ಕರೆದು ಬೆಂಗಳೂರಿನ ಮೆ||ಸ್ಟಾರ್ ಇನ್‍ಫ್ರಾಟೆಕ್ ಅವರಿಗ ಗುತ್ತಿಗೆ ನೀಡಲಾಗಿದೆ. ಪ್ಯಾಕೇಜ್-1ರಡಿ ಸೆಕ್ಟರ್ ಬಿ, ಸಿ & ಡಿ ಅಭಿವೃದ್ದಿ ಪಡಿಸಲು 560.59 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಿದರೆ, ಪ್ಯಾಕೇಜ್-2ರಡಿ ಸೆಕ್ಟರ್ ಎ & ಇ ಅಭಿವೃದ್ದಿಗಾಗಿ 489.43 ಕೋಟಿ ರೂ., ಪ್ಯಾಕೇಜ್-3ರಡಿ ಸೆಕ್ಟರ ಎಫ್, ಜಿ & ಎಚ್ ಅಭಿವೃದ್ದಿಗೆ 471.10 ಕೋಟಿ ರೂ., ಪ್ಯಾಕೇಜ್-4ರಡಿ ಸೆಕ್ಟರ ಐ, ಜೆ & ಕೆ ಅಭಿವೃದ್ದಿಗೆ 528.10 ಕೋಟಿ ರೂ. ಹಾಗೂ ಪ್ಯಾಕೇಜ್-5ರಡಿ ವಿದ್ಯುತ್ತೀಕರಣ ಅಭಿವೃದ್ದಿಗೆ 161.99 ಕೋಟಿ ರೂ.ಗಳಿಗೆ ಗುತ್ತಿಗೆ ನೀಡಲಾಗಿದೆ ಎಂದರು.
ಯುನಿಟ್-3ರ ಅಭಿವೃದ್ದಿ ಕಾಮಗಾರಿಗಳು ಕಳೆದ 5 ವರ್ಷಗಳ ಹಿಂದೆಯೇ ಪ್ರಾರಂಭವಾಗಬೇಕಾಗಿತ್ತು. ಕೆಲವೊಂದು ಅಡೆತಡೆಗಳು ಬಂದಿದ್ದರಿಂದ ಸಾಧ್ಯವಾಗಲಿಲ್ಲ. ಈಗ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಈ ಕಾರ್ಯ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರತಕ್ಕದ್ದು ಎಂದು ಗುತ್ತಿಗೆದಾರರಾದ ಬೆಂಗಳೂರಿನ ಮೆ||ಸ್ಟಾರ್ ಇನ್‍ಫ್ರಾಟೆಕ್‍ನ ಚಂದ್ರಣ್ಣ ಅವರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಬುಡಾದ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ಬಿಟಿಡಿಎ ಸದಸ್ಯರಾದ ಕುಮಾರ ಎಳ್ಳಿಗುತ್ತಿ, ಶಿವಾನಂದ ಟವಳಿ, ಬಿಟಿಡಿಎ ಮುಖ್ಯ ಇಂಜಿನೀಯರ್ ಮನ್ಮಥಯ್ಯಸ್ವಾಮಿ, ಅಧೀಕ್ಷಕ ಇಂಜಿನೀಯರ್ ಸಂಜೀವ ಕುಮಾರ, ಕಾರ್ಯನಿರ್ವಾಹಕ ಅಭಿಯಂತರ ಕಲ್ಲೂರಮಠ, ವಿ.ಸಿ.ಹೆಬ್ಬಳ್ಳಿ, ಬೆಂಗಳೂರು ಮೆ||ಸ್ಟಾರ ಇನ್‍ಫ್ರಾಟೆಕ್‍ನ ಚಂದ್ರಣ್ಣ, ಪ್ರಕಾಶ ತಪಶೆಟ್ಟಿ ಸೇರಿದಂತೆ ಇತರರು ಉಪಸ್ಥಿರಿದ್ದರು.