ಷಿಕಾಗೋ: ಅಮೆರಿಕದ ಷಿಕಾಗೋದಲ್ಲಿ ಭಾರತ ಮೂಲದ ವಿದ್ಯಾರ್ಥಿಯನ್ನು ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪು ಅಟ್ಟಾಡಿಸಿ ಹೊಡೆದು, ಅವರ ಫೋನ್ ದೋಚಿದ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ದರೋಡೆಕೋರರ ದಾಳಿಯಿಂದ ವಿಪರೀತ ರಕ್ತಸ್ರಾವದ ನಡುವೆ ವಿದ್ಯಾರ್ಥಿಯು ಸಹಾಯಕ್ಕಾಗಿ ಅಂಗಲಾಚುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಈ ಘಟನೆಯಿಂದ ಕಂಗೆಟ್ಟಿರುವ ಹೈದರಾಬಾದ್ನಲ್ಲಿನ ಆತನ ಕುಟುಂಬವು ನೆರವಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.
ಅಮೆರಿಕಕ್ಕೆ ತೆರಳಿ ಅವರನ್ನು ಭೇಟಿ ಮಾಡಲು ಪತ್ನಿಗೆ ಅವಕಾಶ ನೀಡಲು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್ ಜೈಶಂಕರ್ ಅವರನ್ನು ಕೋರಿದ್ದು, ತೆಲಂಗಾಣ ಮೂಲದ ಸೈಯದ್ ಮುಜಾಹಿರ್ ಅಲಿ ಮೇಲೆ ಈ ದಾಳಿ ನಡೆದಿದೆ. ಅವರ ಮೂಗು ಹಾಗೂ ಬಾಯಿಯಿಂದ ರಕ್ತ ಒಸರುತ್ತಿದ್ದು, ‘ಸಹಾಯ ಮಾಡಿ’ ಎಂದು ಅವರು ಬೇಡಿಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.