ನಿಮ್ಮ ಸುದ್ದಿ ಬಾಗಲಕೋಟೆ
ತೇರದಾಳ ಪುರಸಭೆ ಮಹಿಳಾ ಸದಸ್ಯರ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರನ್ನು ಕೂಡಲೇ ಬಂಧಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭೆ ಕ್ಷೇತ್ರದ ಮಹಾಲಿಂಗಪುರದಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿ ಮತ್ತವರ ಬೆಂಬಲಿಗರಿಂದ ದೌರ್ಜನ್ಯ ಹಾಗೂ ಗರ್ಭಪಾತಕ್ಕೆ ಒಳಗಾದ ಪುರಸಭೆ ಮಹಿಳಾ ಸದಸ್ಯೆ ಚಾಂದಿನಿ ನಾಯ್ಕ, ಸವಿತಾ ಹುರಕಡ್ಲಿ, ಗೋದಾವರಿ ಬಾಟ ಅವರನ್ನು ಕಾಂಗ್ರೆಸ್ ಮುಖಂಡರ ಜತೆ ಶನಿವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು.
ನಂತರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಪಕ್ಷದ ಹೋರಾಟಕ್ಕೆ ಬಂದಿಲ್ಲ. ರಾಜ್ಯದ ಮೂವರು ಹೆಣ್ಣು ಮಕ್ಕಳಿಗೆ ಆಗಿರುವ ದೌರ್ಜನ್ಯ ಹಾಗೂ ಮಾನವ ಕುಲಕ್ಕೆ ಆಗಿರುವ ಅಪಮಾನದ ವಿರುದ್ಧವಾಗಿ, ನೊಂದ ಹೆಣ್ಣು ಮಕ್ಕಳ ಜತೆ ನಾವಿದ್ದೇವೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇವೆ. ಹೆಣ್ಣು ಕುಟುಂಬದ ಕಣ್ಣು. ನಾವು ಪ್ರತಿಗ್ರಾಮಕ್ಕೆ ಹೋದರೂ ಅಲ್ಲಿ ಗ್ರಾಮದೇವತೆ ಕಾಣುತ್ತೇವೆ. ಆ ತಾಯಿಗೆ ಗೌರವ ತೋರುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇಲ್ಲಿ ನಡೆದಿರುವ ಅಮಾನವೀಯ ಕೃತ್ಯ ಅಪಮಾನ ತರುವಂಥದ್ದು. ಇದನ್ನು ನಾವೆಲ್ಲರೂ ಖಂಡಿಸಬೇಕು. ಸಂತ್ರಸ್ತರಿಗೆ ಗೌರವ, ರಕ್ಷಣೆ ನೀಡಬೇಕು ಎಂದು ಇಲ್ಲಿಗೆ ಬಂದಿದ್ದೇವೆ ಎಂದರು.
ಇಲ್ಲಿಗೆ ಬರುವ ಮುನ್ನ ನಾನು, ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಎಲ್ಲರೂ ಸೇರಿ ದೌರ್ಜನ್ಯಕ್ಕೆ ಒಳಗಾದ ಚಾಂದನಿ ನಾಯಕ್ ಹಾಗೂ ಇನ್ನಿಬ್ಬರು ಮಹಿಳೆಯರನ್ನು ಭೇಟಿ ಮಾಡಿ ಬಂದೆವು. ನಾವು ಅವರನ್ನು ಭೇಟಿ ಮಾಡಿದಾಗ ಅವರು ನಮ್ಮ ಬಳಿ ಹೇಳಿಕೊಂಡ ದುಃಖ ದುಮ್ಮಾನ, ಅನುಭವಿಸಿದ ದೌರ್ಜನ್ಯ ಕೇಳಿ ನಮಗೆ ನೋವಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ, ಗೃಹಸಚಿವ ಬೊಮ್ಮಾಯಿ, ಎಸ್ ಪಿ ಅವರನ್ನು ಕೇಳಲು ಬಯಸುತ್ತೇನೆ. ನಿಮ್ಮ ಮನೆಯ ಹೆಣ್ಣು ಮಗಳಿಗೆ ಇದೇ ರೀತಿ ಆಗಿದ್ದರೆ ಏನು ಮಾಡುತ್ತಿದ್ದಿರಿ? ಆ ಮಹಿಳೆಯರು ತಮ್ಮ ಮತ ಹಾಕಲು ರಕ್ಷಣೆ ಕೊಡಬೇಕಾದದ್ದು ನಿಮ್ಮ ಕರ್ತವ್ಯ. ನಮ್ಮ ವಿರುದ್ಧ ಮತ ಹಾಕಿ ಸರ್ಕಾರ ಬೀಳಿಸಿದವರನ್ನು ನಾವು ಇದೇ ರೀತಿ ಮಾಡಬಹುದಿತ್ತು. ಆದರೆ ನಾವು ಅವರಿಗೆ ರಕ್ಷಣೆ ನೀಡಿ ವಿಧಾನಸೌಧಕ್ಕೆ ಹೋಗಲು ಅವಕಾಶ ಮಾಡಿಕೊಟ್ಟೆವು.
ಆದರೆ ನೀವು ಹೆಣ್ಣು ಮಗಳನ್ನು ಅಪಹರಿಸಿ, ಕಾಂಪೌಂಡ್ ನಿಂದ ಹೊರ ಹಾಕಿದಿರಿ. ಮತ್ತೊಂದು ಹೆಣ್ಣು ಮಗಳನ್ನು ಯಾವ ರೀತಿ ಎಳೆದಾಡಿದರು ಎಂದು ನೋಡಿದ್ದೇವೆ. ಈ ಕೃತ್ಯ ಎಸಗಿದವರನ್ನು ಇದುವರೆಗೂ ಬದಲಿಸಲು ಸಾಧ್ಯವಾಗಲಿಲ್ಲ ಎಂದಾದರೆ, ಕಾನೂನು ಕ್ರಮ ಕೈಗೊಳ್ಳಲು ನೀವು ವಿಫಲರಾಗಿದ್ದೀರಿ ಎಂದಾದರೆ, ಜನ ನಿಮಗೆ ಶಿಕ್ಷೆ ನೀಡಬೇಕಾಗುತ್ತದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು. ಶಾಸಕರ ಬಂಧನ ಆಗಬೇಕು. ದುಶ್ಶಾಸನನಂತೆ ಅಮಾನವೀಯವಾಗಿ ನಡೆದುಕೊಂಡವರನ್ನು ಬಂಧಿಸಬೇಕು ಎಂದು ಆಗ್ರಹಿಸುತ್ತೇವೆ. ಇದನ್ನು ಇಲ್ಲಿಗೇ ಬಿಡುವ ಪ್ರಶ್ನೆಯೇ ಇಲ್ಲ. ಇಲ್ಲೂ ಹೋರಾಟ ಮಾಡುತ್ತೇವೆ, ರಾಜ್ಯದ ಉದ್ದಗಲಕ್ಕೂ ಹಾಗೂ ವಿಧಾನಸೌಧದಲ್ಲೂ ಹೋರಾಟ ಮಾಡುತ್ತೇವೆ. ನಿಮಗೆ ಮಾನ ಮರ್ಯಾದೆ ಇದ್ದರೆ ನಿಮ್ಮ ಶಾಸಕನನ್ನು ಕೂಡಲೇ ಬಂಧಿಸಬೇಕು. ಇದು ಈ ಕ್ಷೇತ್ರದ ಜನರ ಗೌರವದ ಪ್ರಶ್ನೆ. ಇದರ ವಿರುದ್ಧ ನಾವೆಲ್ಲರೂ ಹೋರಾಡಬೇಕು, ಹೋರಾಡಿಯೇ ಹೋರಾಡುತ್ತೇವೆ ಎಂದು ಎಚ್ಚರಿಸಿದರು.