ಯುಎಇ ನಾಡಿನ ದುಬೈನಲ್ಲಿರುವ ಅಲ್ಮಖ್ತೂಮ್ ಇಂಟರ್ನ್ಯಾಷನಲ್ ಏರ್ಪೋರ್ಟ್ ವಿಶ್ವದ ಅತಿದೊಡ್ಡ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದೆ ಎಂದು ಮಾಹಿತಿ ತಿಳಿದು ಬಂದಿದೆ.
‘ಭವಿಷ್ಯದ ತಲೆಮಾರುಗಳಿಗಾಗಿ ಹೊಸ ಏರ್ಪೋರ್ಟ್ ನಿರ್ಮಿಸುತ್ತಿದ್ದೇವೆ. ನಮ್ಮ ಮಕ್ಕಳು ಮತ್ತು ಅವರ ಮಕ್ಕಳಿಗೆ ನಿರಂತರ ಮತ್ತು ಸ್ಥಿರ ಅಭಿವೃದ್ಧಿ ಖಾತ್ರಿ ಪಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಯುಎಇ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಷೀದ್ ಅಲ್ ಮಖ್ತೂಮ್ ಹೇಳಿಕೆ ನೀಡಿದರು.
ದುಬೈನಲ್ಲಿ ಎರಡು ಏರ್ಪೋರ್ಟ್ಗಳಿದ್ದು, ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ (ಡಿಎಕ್ಸ್ಬಿ) ಮತ್ತು ಅಲ್ಮಖ್ತೂಮ್ ಏರ್ಪೋರ್ಟ್ ಇವೆ. ಇಲ್ಲಿ ಸುಮಾರು 9 ಕೋಟಿ ಜನರು ವರ್ಷದಲ್ಲಿ ಬಂದು ಹೋಗುತ್ತಾರೆ.
ಈ ಏರ್ಪೋರ್ಟ್ನಿಂದ 45 ಕಿಮೀ ದಕ್ಷಿಣಕ್ಕೆ ಅಲ್ಮಖ್ತೂನ್ ಏರ್ಪೋರ್ಟ್ ಇದೆ. 2010ಕ್ಕೆ ಆರಂಭವಾದ ಇದರಲ್ಲಿ ಸದ್ಯ ಒಂದು ಟರ್ಮಿನಲ್ ಮತ್ತು ಎರಡು ರನ್ವೇಗಳಿವೆ.
ಈಗ ಇರುವ ಯೋಜನೆಯಲ್ಲಿ ಅಲ್ಮಖ್ತೂನ್ ಏರ್ಪೋರ್ಟ್ನಲ್ಲಿ ಹೊಸ ಟರ್ಮಿನಲ್ ಸಿದ್ಧಗೊಳಿಸಲಾಗುತ್ತಿದ್ದು, ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗುತ್ತದೆ. 400 ವಿಮಾನ ಗೇಟ್ಗಳು ಇರಲಿವೆ.
ಐದು ಪರ್ಯಾಯ ರನ್ವೇಗಳನ್ನು ನಿರ್ಮಿಸಲಾಗುತ್ತಿದೆ. ಇದು ಪೂರ್ಣವಾಗಿ ಸಿದ್ಧಗೊಂಡರೆ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ಏನಿದೆ ಅದಕ್ಕಿಂತ ಐದು ಪಟ್ಟು ಬೃಹತ್ತಾಗಿರಲಿದೆ ಹೊಸ ಎರ್ಪೋರ್ಟ್.
ದುಬೈನ ಈ ಎರಡನೇ ಏರ್ಪೋರ್ಟ್ನಲ್ಲಿ ಹೊಸ ಟರ್ಮಿನಲ್ ಸಿದ್ಧವಾಗುತ್ತಿದೆ. 35 ಬಿಲಿಯನ್ ಡಾಲರ್ ಅಂದಾಜು ವೆಚ್ಚದಲ್ಲಿ ಸಿದ್ದಗೊಳ್ಳಲಿರುವ ಇದು ವಿಶ್ವದಲ್ಲೇ ಅತಿದೊಡ್ಡ ಟರ್ಮಿನಲ್ ಆಗಿದೆ. ದುಬೈನ ದಕ್ಷಿಣ ಭಾಗದಲ್ಲಿರುವ ಮರುಭೂಮಿಯಲ್ಲಿ ಮುಂದಿನ 10 ವರ್ಷದಲ್ಲಿ ಈ ಏರ್ಪೊರ್ಟ್ ಸಿದ್ಧಗೊಳ್ಳಲಿದೆ.
ವಿಶ್ವದ ಅತ್ಯಂತ ಬ್ಯುಸಿ ಏರ್ಪೋರ್ಟ್ಗಳಲ್ಲಿ ಒಂದಾಗಿರುವ ದುಬೈ ಇಂಟರ್ನ್ಯಾಷನಲ್ ಏರ್ಪೋರ್ಟ್ ತನ್ನ ಇಡೀ ಕಾರ್ಯಾಚರಣೆಗಳನ್ನು ಈ ಏರ್ಪೋರ್ಟ್ಗೆ ವರ್ಗಾಯಿಸಲಿದೆ ಎಂದು ಮಾಹಿತಿ ತಿಳಿದು ಬಂದಿದೆ.