ನಿಮ್ಮ ಸುದ್ದಿ ಬಾಗಲಕೋಟೆ
ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ದಲಿತ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆಯಲ್ಲಿ ನಡೆದಿದೆ.
ಐತಿಹಾಸಿಕ ಕ್ಷೇತ್ರ ಐಹೊಳೆಯ ದೇವಾಲಯಗಳ ಸಮುಚ್ಚಯದ ಎದುರಿಗಿನ ರಸ್ತೆಯಲ್ಲಿ ಅಂಬೇಡ್ಕರ್ ಅವರ ಚಿತ್ರವಿರುವ ಪೋಟೋವನ್ನು ಶುಕ್ರವಾರ ರಾತ್ರಿ ಕಿಡಿಗೇಡಿಗಳು ಹರಿದು ಹಾಕಿದ್ದರು. ಇದರಿಂದ ಆಕ್ರೋಶಗೊಂಡ ದಲಿತ ಮುಖಂಡರು ಶನಿವಾರ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಪಂ ಸದಸ್ಯ ಪರಸಪ್ಪ ಮಾದರ ಮಾತನಾಡಿ, ಮಹಾನಾಯಕ ಅಂಬೇಡ್ಕರ್ ಅವರಿಗೆ ಹಲವು ಭಾಗದಲ್ಲಿ ಕಿಡಿಗೇಡಿಗಳು ಅವಮಾನ ಮಾಡುತ್ತಿದ್ದಾರೆ. ಇದು ಐಹೊಳೆಯಲ್ಲೂ ನಡೆದಿದ್ದು ದುರದೃಷ್ಟಕರ. ಕೂಡಲೆ ಆರೋಪಿತರನ್ನು ಪತ್ತೆ ಹಚ್ಚಿ ತಕ್ಕ ಶಿಕ್ಷೆ ಆಗಬೇಕು. ಜತೆಗೆ ಐಹೊಳೆ ಸರ್ಕಲ್‌ನಲ್ಲಿ ಅಂಬೇಡ್ಕರ್ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು.
ಉಪತಹಸೀಲ್ದಾರ್ ಎಂ.ಆರ್.ಹೆಬ್ಬಳ್ಳಿ ಮನವಿ ಸ್ವೀಕರಿಸಿದರು. ಎಸ್‌ಐ ಎಂ.ಜಿ.ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಪ್ರತಿಭಟನೆಯಲ್ಲಿ ಜಗದೀಶ ಹೊಸಮನಿ, ಮಹಾಂತೇಶ ಹೊಸಮನಿ, ಆರ್.ಡಿ.ಮಾದರ, ಚಂದಪ್ಪ ಮಾದರ, ಯಮನಪ್ಪ ಮಾದರ, ಎಸ್.ಸಿ.ಮಾದರ, ಬಿ.ಬಿ.ಮಾದರ, ಪಿ.ಬಿ.ಮಾದರ, ಬಸಪ್ಪ ಮಾದರ ಇತರರು ಇದ್ದರು.