ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಅವರನ್ನು ಅಪಹರಿಸಲು ಶುಕ್ರವಾರ ದುಷ್ಕರ್ಮಿಗಳು ನಡೆಸಿದ ಯತ್ನ ವಿಫಲವಾಗಿದೆ.
ನವನಗರದ 55ನೇ ಸೆಕ್ಟರ್ ನ ಮನೆಯಿಂದ ಗೋಗಿ ಅವರು ಕಚೇರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ.
ಶಂಕರಲಿಂಗ ಗೋಗಿ ಅವರು ತಮ್ಮ ಕಾರ್ ನಲ್ಲಿ ಕಚೇರಿಗೆ ಹೊರಡುತ್ತಿದ್ದಂತೆ ಮನೆ ಸಮೀಪದ ಕ್ರಾಸ್ ನಲ್ಲಿ ನಾಲ್ವರು ಕಾರ್ ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಮತ್ತೊಂದು ಕಾರ್ ನಲ್ಲಿದ್ದ ಗೋಗಿ ಅವರನ್ನು ಕೆಳಗಿಳಿಸಿದ ದುಷ್ಕರ್ಮಿಗಳು ತಮ್ಮ ಕಾರ್ ನಲ್ಲಿ ತಳ್ಳುವ ಯತ್ನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅಧಿಕಾರಿ ಹಾಗೂ ದುಷ್ಕರ್ಮಿಗಳ ಮಧ್ಯೆ ನೂಕಾಟ, ತಳ್ಳಾಟ ನಡೆದಿದೆ. ಅಷ್ಟರಲ್ಲಿ ಗೋಗಿ ಅವರ ಚಾಲಕ ದುಷ್ಕರ್ಮಿಯೊಬ್ಬನ ಮೊಬೈಲ್ ಕಿತ್ತುಕೊಂಡಿದ್ದಾರೆ. ಮೊಬೈಲ್ ಕಸಿದುಕೊಳ್ಳಲು ದುಷ್ಕರ್ಮಿ ಮುಂದಾಗುತ್ತಿದ್ದಂತೆ ಗೋಗಿ ತಮ್ಮ ಕಾರ್ ನಲ್ಲಿ ಕುಳಿತಿದ್ದಾರೆ. ಅಪಹರಣ ಯತ್ನ ವಿಫಲವಾಗುತ್ತಿದ್ದಂತೆ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ನವನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ದುಷ್ಕರ್ಮಿಗಳು ಹಲವು ದಿನಗಳಿಂದ ಅಪಹರಣಕ್ಕೆ ಸಂಚು ನಡೆಸಿದ್ದರು ಎನ್ನಲಾಗಿದೆ. ಇತ್ತೀಚೆಗಷ್ಟೇ ಅಪರಿಚಿತನೊಬ್ಬ ಗೋಗಿ ಮನೆಗೆ ಭೇಟಿ ನೀಡಿ ಸಾಹೇಬರು ಎಲ್ಲಿದ್ದಾರೆ ಎಂದು ವಿಚಾರಿಸಿದ್ದ. ಅಪಹರಣಕ್ಕೆ ಯತ್ನಿಸುವ ಮೊದಲು ಅಪರಿಚಿತನೊಬ್ಬ ಅಧಿಕಾರಿ ಕಾರ್ ಚಾಲಕನ ಬಳಿ ಸಾಹೇಬರು ಆಫೀಸಿಗೆ ಹೋಗುತ್ತಿದ್ದಾರಾ? ಎಂದು ವಿಚಾರಿಸಿದ್ದಾನೆ.
ಈ ಕೃತ್ಯದಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡ ಪೇದೆಯೊಬ್ಬ ಭಾಗಿಯಾಗಿರುವ ಶಂಕೆಯಿದೆ. ಅಧಿಕಾರಿಯನ್ನು ಅಪಹರಿಸಿ ದೊಡ್ಡ ಮೊತ್ತ ದೋಚಲು ಯತ್ನಿಸಿರಬಹುದು ಎನ್ನಲಾಗುತ್ತಿದೆ.
ಘಟನೆ ಬಗ್ಗೆ ತೀವ್ರ ಆತಂಕಕ್ಕೀಡಾಗಿರುವ ಅಧಿಕಾರಿ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.