ನಿಮ್ಮ ಸುದ್ದಿ ವಿಜಯಪುರ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯಲಿರುವ ದ್ವಿಸದಸ್ಯ ಸ್ಥಾನದ ಚುನಾವಣೆಯಲ್ಲಿ ಎರಡೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಅವಿರೋಧ ಆಯ್ಕೆ ಕನಸಾಗಿಯೇ ಉಳಿಯಿತು.
ಡಿ.10ರಂದು ನಡೆಯಲಿರುವ ಚುನಾವಣೆಗೆ 13 ಅಬ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆ ಆಗಿದ್ದವು. 1 ನಾಮಪತ್ರ ತಿರಸ್ಕೃತಗೊಂಡು 12 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದ್ದವು.
ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾದ ನ.26ರಂದು 5 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯುವುದರೊಂದಿಗೆ 7 ಅಭ್ಯರ್ಥಿಗಳು ಕಣದಲ್ಲಿ ಉಳಿದರು.
ಪಕ್ಷೇತರರೊಬ್ಬರೇ ತೊಡಕು
ಪಕ್ಷೇತರರಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಲೋಣಿ ಅವರೊಬ್ಬರು ನಾಮಪತ್ರ ಹಿಂಪಡೆದಿದ್ದರೆ ಉಳಿದ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂಬ ಮಾತು ಶುಕ್ರವಾರ ಮಧ್ಯಾಹ್ನವರೆಗೂ ಕೇಳಿ ಬಂದಿತ್ತು.
ಲೋಣಿ ಅವರ ನಾಮಪತ್ರ ಹಿಂಪಡೆಯುವಂತೆ ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ತೀವ್ರ ಪ್ರಯತ್ನ ನಡೆಸಿದರೂ ಯಾವುದೆ ಫಲ ನೀಡಲಿಲ್ಲ. ಹೀಗಾಗಿ ಉಳಿದ ನಾಲ್ವರು ನಾಮಪತ್ರ ಹಿಂಪಡೆಯದ ಕಾರಣ ಎರಡೂ ರಾಜಕೀಯ ಪಕ್ಷಗಳಿಗೂ ಸದ್ಯ ಚುನಾವಣೆ ಅನಿವಾರ್ಯವಾಗಿದೆ.
ಮಲ್ಲಿಕಾರ್ಜುನ ಲೋಣಿ ಅವರು ನಾಮಪತ್ರ ವಾಪಸ್ ಪಡೆಯದಿರುವುದರ ಹಿಂದೆ ರಾಜಕೀಯ ಒಳ ಆಟವೇ ಬೇರೆ ಇದೆ ಎಂಬ ಮಾತು ಕೇಳಿ ಬಂದಿದೆ.