This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ಆನಂದರಾವ್ ಸರ್ಕಲ್:ಅವಳಿ ಗೋಪುರ

ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ : ಗೋವಿಂದ ಕಾರಜೋಳ

ನಿಮ್ಮ ಸುದ್ದಿ ಬೆಂಗಳೂರು

ಬೆಂಗಳೂರಿನಲ್ಲಿ ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಸದುದ್ದೇಶದಿಂದ ನಗರದ ಹೃದಯಭಾಗವಾಗಿರುವ ಆನಂದರಾವ್ ಸರ್ಕಲ್ ಬಳಿ 1250 ಕೋಟಿ ರೂ. ವೆಚ್ಚದ ಸುಸಜ್ಜಿತ 50 ಮಹಡಿಗಳ ಅವಳಿಗೋಪುರವನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.

ಕಾಮಗಾರಿ ಉದ್ದೇಶಿತ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿರುವುದಲ್ಲದೇ ಸಕಾಲದಲ್ಲಿ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಕಷ್ಟಕರವಾಗುತ್ತಿದೆ. ಸಾರ್ವಜನಿಕರಿಗೂ ಅನಾನುಕೂಲವಾಗುತ್ತಿದೆ ಎಂದರು.

ಇದನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು 2020-21 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು. ಕಳೆದ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ನಗರದ ಹೃದಯ ಭಾಗದಲ್ಲಿರುವ ಈ ಪ್ರದೇಶವು ವಿಧಾನಸೌಧ, ವಿಕಾಸಸೌಧ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಈ ಕಾಮಗಾರಿಯನ್ನು ಪಿಪಿಪಿ ಮಾದರಿಯಲ್ಲಿ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್ (ಎನ್‍ಬಿಸಿಸಿ) ಇವರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳಿಸಲಾಗುವುದು.

8.5 ಎಕರೆ ಸರ್ಕಾರಿ ನಿವೇಶನದಲ್ಲಿ 23.94 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುವುದು. ಶೇ. 60: 40 ಅನುಪಾತದಲ್ಲಿ ಭಾಗಶ: ಕಟ್ಟಡಗಳನ್ನು ನಿರ್ಮಿಸಲಾಗುವುದು. ಎನ್‍ಬಿಸಿಸಿಗೆ 30 ವರ್ಷಗಳ ಲೀಸ್ ನೀಡುವ ಮೂಲಕ ನಿರ್ಮಿಸಲಾಗುವುದು. ಎನ್‍ಬಿಸಿಸಿ ಅವರೊಂದಿಗೆ ಶೀಘ್ರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಶೇ. 60 ರಷ್ಟು ಕಟ್ಟಡ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ರಾಜ್ಯ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದೇ ಕಟ್ಟಡ ನಿರ್ಮಾಣ ವಾಗುತ್ತದೆ. ಕಟ್ಟಡ ನಿರ್ವಹಣೆಯ ವೆಚ್ಚವನ್ನು ಕಟ್ಟಡದ ವಾಸಿಗಳಿಂದಲೇ ಭರಿಸಲು ಉದ್ದೇಶಿಸಿರುವುದರಿಂದ ನಿರ್ವಹಣೆಯ ವೆಚ್ಚವೂ ಉಳಿಕೆಯಾಗಲಿದೆ.

ಯಾವುದೇ ವೆಚ್ಚವಿಲ್ಲದೇ ಸರ್ಕಾರಕ್ಕೆ 263 ಕೋಟಿ ರೂ. ನಿವ್ವಳ ಲಾಭವಾಗಲಿದೆ. ಈ ಕಾಮಗಾರಿಯನ್ನು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.

ಈ ನಿವೇಶನದಲ್ಲಿ 1940 ಕ್ಕಿಂತಲೂ ಹಿಂದೆ ನಿರ್ಮಿಸಲಾದ ಲೋಕೋಪಯೋಗಿ ಇಲಾಖೆಯ ಕಟ್ಟಡಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡಗಳು ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳಿದ್ದು, ಇವುಗಳನ್ನು ಶೀಘ್ರವಾಗಿ ತೆರವುಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಶ್ರೀ ರಜನೀಶ್ ಗೋಯಲ್, ಮುಖ್ಯಅಭಿಯಂತರರಾದ ಶಿವಯೋಗಿ ಹಿರೇಮಠ, ಅಧೀಕ್ಷಕ ಅಭಿಯಂರರಾದ ಶ್ರೀ ಎಲ್. ಶ್ರೀಧರ ಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಶ್ರೀ ಜಿ. ಡಿ. ಕುಮಾರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Nimma Suddi
";