ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಗ್ರಾಮದಲ್ಲಿ ಸಿಸಿ ರಸ್ತೆ ಮೇಲೆಯೇ ಡಾಂಬರ್ ರಸ್ತೆ ನಿರ್ಮಿಸುತ್ತಿರುವ ವಿಷಯ ಜನರ ಸಂಶಯಕ್ಕೆ ಕಾರಣವಾಗಿದೆ.
ರಾಮದುರ್ಗದಿಂದ ರಾಮಥಾಳ ರಸ್ತೆ ನಿರ್ಮಾಣದ ವೇಳೆ ಐಹೊಳೆ ಗ್ರಾಮದ ಸಮೀಪದ ಚಿಲ್ಲಾಪೂರ ಕ್ರಾಸ್‌ನಿಂದ ಕಳ್ಳಿಗುಡ್ಡಕ್ಕೆ ತೆರಳುವ ಮಾರ್ಗ ಮದ್ಯೆ ಈ ಹಿಂದೆ ೨೦೧೬-೧೭ರಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಅದು ಆಗಲೇ ಕಳಪೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಸರಿಯಾಗಿ ರಸ್ತೆ ನಿರ್ಮಾಣ ಮಾಡದ ಕಾರಣ ನೀರೆಲ್ಲ ರಸ್ತೆಯಲ್ಲೇ ನಿಂತು ಸಂಚಾರ ಅಸ್ತವ್ಯಸ್ಥವಾಗಿತ್ತು. ಜನರು ಆಗಲೇ ಗುತ್ತಿಗೆದಾರಿಗೆ ಸರಿಯಾಗಿ ನಿರ್ಮಿಸುವಂತೆ ಎಚ್ಚರಿಸಿದ್ದರು.
ಸದ್ಯ ಅದೇ ಸಿಸಿ ರಸ್ತೆ ಮೇಲೆ ಡಾಂಬರ್ ರಸ್ತೆ ನಿರ್ಮಿಸುತ್ತಿರುವುದು ಜನರ ಸಂಶಯಕ್ಕೆ ಕಾರಣವಾಗಿದೆ. ಹೀಗೆ ಮಾಡುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸುವ ಗ್ರಾಮಸ್ಥರು ಗುತ್ತಿಗೆದಾರರನ್ನು ಸಂಶಯದಿAದ ನೋಡುವಂತಾಗಿದೆ ಎಂದು ದೂರಿದ್ದಾರೆ.
ಮತ್ತೊಂದೆಡೆ ರಸ್ತೆ ನಿರ್ಮಾಣದ ಕುರಿತು ಕೆ-ಶಿಪ್ ಎಂಜಿನಿಯರ್ ಹೇಳುವುದೇ ಬೇರೆ. ಈ ಹಿಂದೆಯೇ ಡಾಂಬರ್ ರಸ್ತೆ ನಿರ್ಮಿಸಬೇಕಿತ್ತು. ಆದರೆ ಹಲವು ತೊಂದರೆಗಳಿಂದ ಸಿಸಿ ರಸ್ತೆ ನಿರ್ಮಿಸಲಾಗಿತ್ತು. ಸದ್ಯ ನಿರ್ಮಾಣವಾದ ಸಿಸಿ ರಸ್ತೆಗೆ ಗುತ್ತಿಗೆದಾರರಿಗೆ ಬಿಲ್ ದೊರೆಯುವುದು ಕಷ್ಟ. ಹೀಗಾಗಿ ಗುತ್ತಿಗೆದಾರರೇ ತಮ್ಮ ಸ್ವಂತ ಖರ್ಚಿನಲ್ಲಿ ಡಾಂಬರ್ ರಸ್ತೆ ನಿರ್ಮಿಸುತ್ತಿದ್ದಾರೆ ಎಂಬ ಸಬೂಬು ಹೇಳುತ್ತಿದ್ದಾರೆ.
ಹೀಗೆ ಮಾಡುವ ಬದಲಾಗಿ ಈ ಮುಂಚೆಯೇ ಡಾಂಬರ್ ರಸ್ತೆ ನಿರ್ಮಿಸಿದ್ದರೆ ಗುತ್ತಿಗೆದಾರರಿಗೂ ಅನುಕೂಲವಾಗುತ್ತಿತ್ತಲ್ಲವೇ? ಎರಡೆರಡು ಬಾರಿ ರಸ್ತೆ ನಿರ್ಮಿಸುವ ಅವಶ್ಯಕತೆ ಏನಿತ್ತು? ಎಂದು ಗ್ರಾಮಸ್ಥ ಕೊಟ್ರೇಶ ಸಾರಂಗಮಠ ಪ್ರಶ್ನಿಸಿದ್ದಾರೆ.