ಡಿಸಿಎಂ ಗೋವಿಂದ ಕಾರಜೋಳ ಹೇಳಿಕೆ
ಚಿಂಚಖಂಡಿ ಹತ್ತಿರ ಬ್ಯಾರೇಜ್ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ
ನಿಮ್ಮ ಸುದ್ದಿ ಬೆಂಗಳೂರು
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಚಿಂಚಖಂಡಿ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ 9.90 ಕೋಟಿ ರೂ. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.
ಪ್ರಸ್ತಾಪಿತ ಸೇತುವೆ ಸಹಿತ ಬ್ಯಾರೇಜಿನ ಉದ್ದ 99 ಮೀಟರ್ ಆಗಿದ್ದು ಮೇಲ್ಬಾಗದ ಅಗಲ 5.5 ಮೀ, ಮತ್ತು 4 ಮೀಟರ್ ಎತ್ತರ ಆಗಿರುತ್ತದೆ. ಈ ಬ್ಯಾರೇಜಿನ 19 ಮುಖ್ಯ ನಡುಗಂಬಗಳು ಮತ್ತು 20 ಕಿಂಡಿಗಳೊಂದಿಗೆ ನಿರ್ಮಿಸಲು ವಿನ್ಯಾಸಿಲಾಗಿದ್ದು, ಈ ಬ್ಯಾರೇಜಿನ ಒಟ್ಟು ಶೇಖರಣಾ ಸಾಮಥ್ರ್ಯ 41.67 ದಶಲಕ್ಷ ಘನ ಅಡಿಗಳಾಗಿರುತ್ತದೆ.
ಈ ಬ್ಯಾರೇಜಿನ ನಿರ್ಮಾಣದಿಂದ ಮುಧೋಳ್ ತಾಲೂಕಿನ ಚಿಂಚಖಂಡಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ 268 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದ ರೈತರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ ಡಿಸಿಎಂ, ಈ ಕಾಮಗಾರಿಯು ಕಾಲಮಿತಿಯೊಳಗೆ ಉತ್ತಮ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.