ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಬಿಜೆಪಿ ಬೆಂಬಲಿತರ ಪಾಲಾಗಿವೆ.
೧೪ ಸದಸ್ಯ ಬಲದ ಗ್ರಾಪಂನಲ್ಲಿ ೮ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ೬ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿತ್ತು. ಅಧ್ಯಕ್ಷ ಸ್ಥಾನಕ್ಕೆ ರೇಣವ್ವ ಹಂಡರಗಲ್ ಹಾಗೂ ಭೀಮವ್ವ ಹಾದಿಮನಿ ಸ್ಪರ್ಧಿಸಿದ್ದರೆ ಉಪಾಧ್ಯಕ್ಷ ಸ್ಥಾನಕ್ಕೆ ರವಿಕುಮಾರ ಗಾದಿ ಹಾಗೂ ಚಂದ್ರಪ್ಪ ಹೀರಾಳ ಸ್ಪರ್ಧೆಯೊಡ್ಡಿದ್ದರು.
ಮೊದಲು ಉಪಾಧ್ಯಕ್ಷ ಸ್ಥಾನದ ಫಲಿತಾಂಶ ಘೋಷಿಸಲಾಯಿತು. ಬಿಜೆಪಿ ಬೆಂಬಲಿತ ಅಭ್ಯರ್ಥಿ ರವಿಕುಮಾರ ಹಾದಿ ೮ ಮತ, ಕಾಂಗ್ರೆಸ್ ಬೆಂಬಲಿತ ಚಂದ್ರಪ್ಪ ಹೀರಾಳ ೫ ಮತ ಪಡೆದರೆ ಒಂದು ಖಾಲಿ ಮತಪತ್ರವಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ರವಿಕುಮಾರ ಹಾದಿ ಆಯ್ಕೆ ಆದರು.
ಬಿಜೆಪಿಗೆ ಒಲಿದ ಅದೃಷ್ಠ
೧೪ ಸದಸ್ಯ ಬಲದಲ್ಲಿ ೮ ಸದಸ್ಯರು ಬಿಜೆಪಿ ಬೆಂಬಲಿಗರಾಗಿದ್ದರು. ಮತದಾನ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಸುಲಭವಾಗಿ ಎಂದು ಭಾವಿಸಿದ್ದರೂ ಅಧ್ಯಕ್ಷ ಸ್ಥಾನದ ಚುನಾವಣೆ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಅಧ್ಯಕ್ಷ ಸ್ಥಾನದ ಆಯ್ಕೆಗೆ ಮತ ಎಣಿಕೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ತಲಾ ೭ ಮತ ಪಡೆಯುವ ಮೂಲಕ ಸಮಬಲ ಸಾಧಿಸಿದರು. ಆಗ ಲಾಟರಿ ಮೂಲಕ ಆಯ್ಕೆ ನಡೆದು ಅದೃಷ್ಠ ಬಿಜೆಪಿಗೆ ಒಲಿದ ಕಾರಣ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣವ್ವ ಹಂಡರಗಲ್ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆಂದು ಚುನಾವಣಾಧಿಕಾರಿ ಗುರುರಾಜ ದಾಶ್ಯಾಳ ಘೋಷಿಸಿದರು.
ವಿಜಯೋತ್ಸವ
ತೀವ್ರ ಸಂಕಷ್ಟಕ್ಕೆ ಕಾರಣವಾಗಿದ್ದ ಅಧ್ಯಕ್ಷ ಸ್ಥಾನ ಕೊನೆಗೂ ಬಿಜೆಪಿ ಪಾಲಾಗುತ್ತಿದ್ದಂತೆ ಗ್ರಾಮದಲ್ಲಿ ಬಿಜೆಪಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಗುಲಾಲು ಎರಚಿಕೊಂಡು ಸಿಹಿ ಹಂಚಿ ಸಂಭ್ರಮಿಸಿದರು. ಸದಸ್ಯರಾದ ಈಶ್ವರ ರೇಷ್ಮಿ, ಮಹಾಂತೇಶ ಬಾರಡ್ಡಿ, ಬಾಲಪ್ಪ ಗಂಗೂರ, ರಮೇಜಾಬೇಗಂ ಲತೀಬನವರ, ರತ್ನವ್ವ ಖೈರವಾಡಗಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎನ್.ಸಿ.ಗೌಡರ, ಸಂಗಣ್ಣ ನಾಲತವಾಡ, ಎಚ್.ಡಿ.ವೈದ್ಯ, ಶಿವು ಗಾದಿ, ಯಂಕಣ್ಣ ಬೇವೂರ, ಗಂಗೂರ ಗ್ರಾಮದ ಹಿರಿಯರಾದ ಮುತ್ತಯ್ಯ ಹಿರೇಮಠ, ಚನ್ನನಗೌಡ ಗೌಡರ, ಮಲ್ಲಿಕಾರ್ಜುನ ರೇಷ್ಮಿ, ಹಡಗಲಿ ಗ್ರಾಮದ ಶಿವನಗೌಡ ಗೌಡರ, ಗಿರಿಯಪ್ಪ ಪೂಜಾರಿ ಇತರರು ಇದ್ದರು.